ADVERTISEMENT

ಕೆಎಂಸಿಯಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 15:06 IST
Last Updated 2 ಡಿಸೆಂಬರ್ 2021, 15:06 IST
ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಗುರುವಾರ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗವನ್ನು ಉದ್ಘಾಟಿಸಿದರು.
ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಗುರುವಾರ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗವನ್ನು ಉದ್ಘಾಟಿಸಿದರು.   

ಉಡುಪಿ: ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಗುರುವಾರ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ‘ಇಂಟರ್ವೆನ್ಷನಲ್ ರೇಡಿಯಾಲಜಿ ತಂತ್ರಜ್ಞಾನವು ವಿಕಿರಣ ಶಾಸ್ತ್ರದ ವೈದ್ಯಕೀಯ ವಿಶೇಷತೆಯಾಗಿದ್ದು, ಮನುಷ್ಯನ ಪ್ರತಿ ಅಂಗ ವ್ಯವಸ್ಥೆಯಲ್ಲಿನ ರೋಗಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ದೇಹದ ಆಳವಾದ ರಚನೆಗಳಲ್ಲಿ ರಂಧ್ರ ಅಥವಾ ಸಣ್ಣ ಸೂಜಿ, ತಂತಿಗಳನ್ನು ಬಳಸಿ, ಸಣ್ಣ ಛೇದನದ ಮೂಲಕ ಇಂಟರ್ವೆನ್ಷನಲ್ ರೇಡಿಯಾಲಜಿ ತಂತ್ರಜ್ಞಾನ ಬಳಸಿಕೊಂಡು ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎಂದರು.

ರೇಡಿಯೋಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶಿನಿ ಮಾತನಾಡಿ, ‘ಇಂಟರ್ವೆನ್ಷನಲ್ ರೇಡಿಯಾಲಜಿ (ಐಆರ್) ಕಾರ್ಯವಿಧಾನಗಳು ಶಸ್ತ್ರಚಿಕಿತ್ಸೆಗೆ ಪರ್ಯಾಯ ಚಿಕಿತ್ಸೆಯಾಗಿ ವಿಕಸನಗೊಂಡಿವೆ. ಈ ತಂತ್ರಜ್ಞಾನ ಬಳಸಿಕೊಂಡು ರಕ್ತ ನಷ್ಟ, ತೆರೆದ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳು ಮತ್ತು ರೋಗದ ತೀವ್ರತೆಯನ್ನು ತಪ್ಪಿಸಬಹುದು ಎಂದರು.

ADVERTISEMENT

ಅನ್ಯೂರಿಮ್‌ನಿಂದ ಉಂಟಾಗುವ ಸೆರೆಬ್ರಲ್ ಹೆಮರೇಜ್‌ಗೆ ಸುರುಳಿಯಾಕಾರದ ಮೂಲಕವೂ ಚಿಕಿತ್ಸೆ ನೀಡಬಹುದು. ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸಬಹುದು. ಕ್ಯಾನ್ಸರ್‌ ರೋಗಗಳಲ್ಲಿ ಈಚೆಗಿನ ಅತ್ಯಾಧುನಿಕ ಚಿಕಿತ್ಸೆಯಲ್ಲಿ ಔಷಧವನ್ನು ನೇರವಾಗಿ ಅಪಧಮನಿಗಳ ಮೂಲಕ ಗಡ್ಡೆಗೆ ತಲುಪಿಸಲಾಗುತ್ತದೆ. ಇದರಿಂದಾಗಿ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು ಎಂದರು.

ಉಬ್ಬಿರುವ ರಕ್ತನಾಳಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಚಿಕಿತ್ಸೆ ನೀಡಬಹುದು. ಪ್ರಸವನಂತರದ ರಕ್ತಸ್ರಾವದ ಸಂದರ್ಭಗಳಲ್ಲಿ ಜೀವ ಉಳಿಸುವ ಎಂಬೋಲೈಸೇಶನ್ ಕಾರ್ಯವಿಧಾನಗಳ ಚಿಕಿತ್ಸಾ ವಿಧಾನವು ರೋಗಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ವಿಕಿರಣಶಾಸ್ತ್ರ ವಿಭಾಗದಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿಯ ವಿಭಾಗವನ್ನು ಸ್ಥಾಪಿಸಲಾಗಿದ್ದು, ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಸ್ತೂರಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ.ಆನಂದ ವೇಣುಗೋಪಾಲ್, ಮಂಗಳೂರು ವಲಯದ ನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ, ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ಕೀರ್ತಿರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.