ADVERTISEMENT

ಕೊಲ್ಲೂರು–ಕೊಡಚಾದ್ರಿ ರೋಪ್‌ವೇ ಯೋಜನೆಗೆ ಸರ್ವೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 15:23 IST
Last Updated 15 ಸೆಪ್ಟೆಂಬರ್ 2020, 15:23 IST
ಕೊಲ್ಲೂರಿನಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ‘ರೋಪ್‌ ವೇ’ ಯೋಜನೆಯ ಸರ್ವೆ ಕಾರ್ಯಕ್ಕೆ ಮಂಗಳವಾರ ಕೊಲ್ಲೂರು ದೇವಸ್ಥಾನದ ಮುಂಭಾಗ ಶಾಸಕ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.
ಕೊಲ್ಲೂರಿನಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ‘ರೋಪ್‌ ವೇ’ ಯೋಜನೆಯ ಸರ್ವೆ ಕಾರ್ಯಕ್ಕೆ ಮಂಗಳವಾರ ಕೊಲ್ಲೂರು ದೇವಸ್ಥಾನದ ಮುಂಭಾಗ ಶಾಸಕ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.   

ಕುಂದಾಪುರ:ಕೊಲ್ಲೂರಿನಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ‘ರೋಪ್‌ ವೇ’ ಯೋಜನೆಯ ಸರ್ವೆ ಕಾರ್ಯಕ್ಕೆ ಮಂಗಳವಾರ ಶಾಸಕ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಎದುರು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ‘ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿದ್ದಾಗ ಕೊಲ್ಲೂರು-ಕೊಡಚಾದ್ರಿ ರೋಪ್ ವೇ ಕನಸು ಇತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಇಚ್ಚಾಶಕ್ತಿಯಿಂದ ಬಹು ವರ್ಷಗಳ ಕನಸು ನನಸಾಗುವ ಕಾಲ ಕೂಡಿಬರುತ್ತಿದೆ’ ಎಂದರು.

ರೋಪ್ ವೇ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕೊಡಚಾದ್ರಿ ಅರಣ್ಯಕ್ಕೆ ಹಾನಿಯಾಗದಂತೆ ವೈಜ್ಞಾ‌ನಿಕ ಕಾಮಗಾರಿ‌ ನಡೆಸಲು ಯೋಜನೆ ರೂಪಿಸಲಾಗುತ್ತದೆ ಎಂದರು.

ADVERTISEMENT

ಯೋಜನೆ ಅನುಷ್ಠಾನಕ್ಕೆ ಬಂದರೆ ಕೊಲ್ಲೂರಿನ ಬಾಡಿಗೆ ಜೀಪು ಚಾಲಕರಿಗೆ ಉದ್ಯೋಗ ಇಲ್ಲದಂತಾಗುತ್ತದೆ ಎಂಬ ಆತಂಕ ಬೇಡ. ರೋಪ್ ವೇ ನಿರ್ದಿಷ್ಟ ಭಾಗದಲ್ಲಿ ನಿರ್ಮಾಣವಾಗುವುದರಿಂದ, ನಿಸರ್ಗ ಸೌಂದರ್ಯ ಸವಿಯುವ ಪ್ರವಾಸಿಗರು ಜೀಪ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂದರು.

ಕೊಲ್ಲೂರು ಪ್ರದೇಶದಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ರೋಪ್ ವೇ ದೇಶದ ಅತಿ ಉದ್ದದ 'ರೋಪ್ ವೇ' ಎನ್ನುವ ಅಗ್ಗಳಿಕೆ ಪಡೆಯಲಿದೆ.ಯುರೋಪ್ ಮಾದರಿಯಲ್ಲಿ ರೋಪ್‌ವೇ ಕಾಮಗಾರಿ ನಡೆಸುವ ಉದ್ದೇಶವಿದ್ದು, ಇಪಿಐಎಲ್ ಕಂಪೆನಿ ಸರ್ವೇ ಕಾರ್ಯ ನಡೆಸುತ್ತಿದೆ ಎಂದರು.

ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಯಡ್ತರೆ ಶಂಕರ್ ಪೂಜಾರಿ, ಬಿಜೆಪಿ ಪ್ರಮುಖರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಪ್ರಕಾಶ್ ಪೂಜಾರಿ ಜಡ್ಡು, ಸಂತೋಷ್ ಭಟ್, ಚಂದ್ರಯ್ಯ ಆಚಾರ್ ಕಳಿ, ಉದ್ಯಮಿ ವೆಂಕಟೇಶ ಕಿಣಿ ಬೈಂದೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.