ADVERTISEMENT

ಕುಂದಾಪುರ | ಬಸ್‌ ಟಿಪ್ಪರ್ ಡಿಕ್ಕಿ: ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:42 IST
Last Updated 6 ಜನವರಿ 2026, 6:42 IST
<div class="paragraphs"><p>ಕುಂದಾಪುರದ ಸಮೀಪದ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕೆಎಸ್‌ಆರ್‌‌ಟಿಸಿ ಬಸ್‌</p></div>

ಕುಂದಾಪುರದ ಸಮೀಪದ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕೆಎಸ್‌ಆರ್‌‌ಟಿಸಿ ಬಸ್‌

   

ಕುಂದಾಪುರ: ನಗರದಿಂದ ಕೆಂಚನೂರು ಮಾರ್ಗವಾಗಿ ಆಜ್ರಿಗೆ ಸಾಗುತ್ತಿದ್ದ ಸರ್ಕಾರಿ ಬಸ್ ಹಾಗೂ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ನಡುವೆ ತಲ್ಲೂರು–ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ತಿರುವಿನಲ್ಲಿ ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 16ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಮೂವರ ಪೈಕಿ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಚನಾ (16), ಚೈತ್ರಾ (16) ಎಂಬುವರು ಗಂಭೀರವಾಗಿ ಗಾಯಗೊಂಡು ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರದಾ ಆಜ್ರಿ ಎಂಬುವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯಾರ್ಥಿಗಳಾದ ಧನ್ವಿತ್ ಬೋವಿ, ಆಶಿಶ್ ಪೂಜಾರಿ ನೇರಳಕಟ್ಟೆ, ಅಭಿಲಾಷ್ ಪೂಜಾರಿ ನೇರಳಕಟ್ಟೆ, ಸುಜನ್ ಅಬ್ಬಿಗುಡ್ಡೆ, ಮಂಜುನಾಥ ಪೂಜಾರಿ ನೇರಳಕಟ್ಟೆ, ಸತ್ಯಾವತಿ ಪೂಜಾರಿ ಕೆಳಬಾಂಡ್ಯ, ಸನ್ಮಿತ್ ಶೆಟ್ಟಿ ಆಜ್ರಿ, ಮಮತಾ ಶೆಟ್ಟಿ ಆಜ್ರಿ ಅವರು ನಗರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಹರೀಶ್, ಸ್ಪಂದನಾ ದಾಖಲಾಗಿದ್ದಾರೆ. ಸಾವಿತ್ರಿ, ಶ್ರೀಮತಿ, ಸ್ವಾತಿ, ಉದಯ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಟಿಪ್ಪರ್ ಚಾಲಕ ರಾಘವೇಂದ್ರ ತೀರ್ಥಹಳ್ಳಿ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರಾದ ಪ್ರಶಾಂತ ಪೂಜಾರಿ ಕರ್ಕಿ ಮುಂತಾದವರು ಸ್ವಂತ ವಾಹನಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ತೋರಿದ್ದಾರೆ. 

ಗಾಯಾಳುಗಳ ಸಂಪೂರ್ಣ ವೆಚ್ಚವನ್ನು ಕೆಎಸ್‌ಆರ್‌ಟಿಸಿ ಭರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ ಎಂದು ಡಿಪೊ ವ್ಯವಸ್ಥಾಪಕ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. 

ಎಸ್‌ಪಿ ಭೇಟಿ: ಅಪಘಾತದ ಮಾಹಿತಿ ಪಡೆದುಕೊಂಡ ಎಸ್‌ಪಿ ಹರಿರಾಂಶಂಕರ್ ಅವರು ಮಣಿಪಾಲ ಮತ್ತು ಕುಂದಾಪುರದ ಆಸ್ಪತ್ರೆಗಳಿಗೆ ತೆರಳಿ  ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಡಿವೈ‌ಎಸ್‌ಪಿ ಎಚ್‌.ಡಿ.ಕುಲಕರ್ಣಿ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಕೆ, ಕುಂದಾಪುರ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ‌ಸಂತೋಷ್ ಕಾಯ್ಕಿಣಿ, ಕುಂದಾಪುರ ಪೊಲೀಸ್ ಇನ್‌ಸ್ಪೆಕ್ಟರ್ ಜಯರಾಮ ಗೌಡ, ಪಿಎಸ್‌ಐಗಳಾದ ನಾಸೀರ್ ಹುಸೇನ್, ಚಂದ್ರಕಲಾ, ಪುಷ್ಪಾ, ಸಂಚಾರ ಠಾಣಾ ಎಸ್ಐ ಸುಧಾ ಪ್ರಭು ಇದ್ದರು. 

ಅಪಾಯಕಾರಿ ತಿರುವು: ಶೆಟ್ರಕಟ್ಟೆ ಪೆಟ್ರೋಲ್ ಬಂಕ್ ಬಳಿಯ ತಿರುವು ಅಪಾಯಕಾರಿಯಾಗಿದ್ದು, ಈ ಭಾಗದಲ್ಲಿ ಹಿಂದೆಯೂ ಬಹಳಷ್ಟು ಅಪಘಾತ ಸಂಭವಿಸಿವೆ. ತಿರುವಿನಲ್ಲಿ ರಸ್ತೆಯ ಮಗ್ಗಲುಗಳಲ್ಲಿ ಬೆಳೆದು ನಿಂತ ಮರಗಳಿದ್ದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ತಪ್ಪಿದ ಮುಖಾಮುಖಿ ಡಿಕ್ಕಿ

ಸಂಜೆ 4.19ರ ವೇಳೆಗೆ ಕುಂದಾಪುರದಿಂದ ಆಜ್ರಿ– ಸಿದ್ದಾಪುರ ಕಡೆ ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಸಾಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಬಲ ಭಾಗದ ಚಾಲಕನ ಬದಿಯ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ.   ವೇಗವಾಗಿ ಬರುತ್ತಿದ್ದ ಟಿಪ್ಪರಿನ ರಭಸ ನೋಡಿ ಬಸ್‌ ಚಾಲಕ ಹನುಮಂತ ಹಠಾತ್ತನೆ ಎಡಬದಿಗೆ ತಿರುಗಿಸಿದ್ದರಿಂದ ಮುಖಾಮುಖಿ ಡಿಕ್ಕಿ ತಪ್ಪಿದೆ ಎಂದು
ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.