ಕುಂದಾಪುರ: ನಾವು ಯೇಸುವಿನಲ್ಲಿ ವಿಶ್ವಾಸ ಇಡಬೇಕು. ಲಾಜರಸ್ ಮರಣ ಹೊಂದಿದಾಗ ಆತನ ಸಹೋದರಿ, ‘ಸ್ವಾಮಿ ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ’ ಎಂದು ಹೇಳಿದಾಗ, ‘ನನ್ನ ಮೇಲೆ ಭರವಸೆ ಇಡಿ ಈಗಲೂ ಆತ ಜೀವಂತವಾಗುತ್ತಾನೆ’ ಎಂದು ಲಾಜರಸನನ್ನು ಯೇಸು ಜೀವಂತಗೊಳಿಸಿದ್ದರು ಎಂದು ಇಲ್ಲಿನ ಸಿ.ಎಸ್.ಐ ಚರ್ಚ್ ಧರ್ಮಗುರು ಇಮಾನ್ಯುವೆಲ್ ಜಯಕರ್ ಹೇಳಿದರು.
ಇಲ್ಲಿನ ರೋಜರಿ ಮಾತಾ ಚರ್ಚ್‌ನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಅವರು ಮಾತನಾಡಿದರು.
ಯೇಸು ಪುನರುತ್ಥಾನರಾಗಿ ಶಿಷ್ಯರಿಗೆ ಕಾಣಿಸಿಕೊಂಡಾಗ ಶಿಷ್ಯ ಥಾಮಸ್ ಇರಲಿಲ್ಲ. ಇದರಿಂದ ನೊಂದುಕೊಂಡಿದ್ದ ಥಾಮಸ್‌ಗೆ ಒಂದು ವಾರದ ಬಳಿಕೆ ಯೇಸು ಪುನಃ ಕಾಣಿಸಿ ತನ್ನ ಕೈ ಕಾಲಿಗೆ ಹೊಡೆದ ಮೊಳೆಗಳು, ಭರ್ಚಿಯಲ್ಲಿ ಚುಚ್ಚಿದ ಗಾಯಗಳನ್ನು ತೋರಿಸುತ್ತಾರೆ. ಥಾಮಸ್ ಪಶ್ಚಾತ್ತಾಪ ಪಟ್ಟಾಗ, ನಿನ್ನ ಕಣ್ಣುಗಳಿಂದ ನನ್ನನ್ನು ನೋಡಿರುವುದಕ್ಕೆ ವಿಶ್ವಾಸವಿರಿಸಿದೆ. ಆದರೆ ನನ್ನನ್ನು ಕಾಣದೆ ವಿಶ್ವಾಸಿಸುವವರೂ ಭಾಗ್ಯವಂತರು ಎನ್ನುತ್ತಾರೆ. ಈ ದೃಷ್ಟಾಂತದಿಂದ ನಾವು ವಿಶ್ವಾಸದಲ್ಲಿ ಬದುಕು ಕಟ್ಟಿಕೊಳ್ಳಬೇಕು, ಒಬ್ಬರನೊಬ್ಬರು ಪ್ರೀತಿಸುವುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಕುಂದಾಪುರ ರೋಮನ್ ಕ್ರೈಸ್ತ ವಲಯದ ಪ್ರಧಾನ ಧರ್ಮಗುರು ಪೌಲ್ ರೇಗೊ ನೇತೃತ್ವ ವಹಿಸಿದ್ದರು. ಬೈಬಲ್ ಗ್ರಂಥವನ್ನು ಮೆರವಣಿಗೆಯಲ್ಲಿ ತಂದು ಪೀಠದಲ್ಲಿಟ್ಟು ದೀಪ ಬೆಳಗಿಸಿ, ಆಶೀರ್ವದಿಸಿದ ಬಳಿಕ ಪ್ರಾರ್ಥನಾ ಕೂಟಕ್ಕೆ ಚಾಲನೆ ನೀಡಲಾಯಿತು. ಭಜನೆ, ಕೀರ್ತನೆ, ಭರವಸೆಯ ಪ್ರಾರ್ಥನೆಗಳು, ಮಧ್ಯಸ್ತಿಕೆಯ ಪ್ರಾರ್ಥನೆಗಳು, ಪವಿತ್ರ ಗ್ರಂಥದ ವಾಚನ, ಶುಭ ಸಂದೇಶದ ವಾಚನ, ಪ್ರವಚನ ನಡೆದವು.
ರೋಮನ್ ಕಥೊಲಿಕ್, ಸಿ.ಎಸ್.ಐ ಮಲಬಾರ್ ವಿಧಿ ಸೇರಿದಂತೆ ವಿವಿಧ ಕ್ರೈಸ್ತ ಪಂಗಡದವರು, ರೋಮನ್ ಕಥೊಲಿಕ್ ಚರ್ಚ್ ಧರ್ಮಗುರುಗಳು, ಬೈಂದೂರು ಮಲಬಾರ್ ವಿಧಿಯ ಧರ್ಮಗುರು ಮಾಥ್ಯು, ಕುಂದಾಪುರ ಕಾನ್ವೆಂಟಿನ ಧರ್ಮ ಭಗಿನಿಯರು, ಅತಿಥಿ ಧರ್ಮಭಗಿನಿಯರು, ಕುಂದಾಪುರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹ, ವಾಳೆಯ ಗುರಿಕಾರರು ಭಾಗವಹಿಸಿದ್ದರು. ಹಂಗಳೂರು ಚರ್ಚ್ ಧರ್ಮಗುರು ಆಲ್ಬರ್ಟ್ ಕ್ರಾಸ್ತ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.