
ಕುಂದಾಪುರ: ಕ್ಷೇತ್ರದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಡಿಪಿಆರ್ ಸಿದ್ಧಪಡಿಸಿ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದರು.
ಕಂಡ್ಲೂರಿನಲ್ಲಿ ಭಾನುವಾರ ನಡೆದ ಬೃಹತ್ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬೇರೆ ಭಾಗಗಳಿಗೆ ನೀರು ಒಯ್ಯುವ ಮೊದಲು ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಕ್ಷೇತ್ರದ ಜನರು ಸಮಸ್ಯೆ ಹೇಳಿಕೊಂಡಾಗ ಸ್ಪಂದಿಸುವುದು ನನ್ನ ಜವಾಬ್ದಾರಿ. ಸ್ವಾರ್ಥಕ್ಕೆ ಯಾರಿಗೂ ಪತ್ರ ಬರೆದಿಲ್ಲ. ಯಾವುದೇ ಕಾರಣಕ್ಕೂ ನೀಡಿರುವ ಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಬಿಟ್ಟು ಹೋಗಿರುವ ಪ್ರದೇಶಗಳನ್ನು ಸೇರಿಸಿ ನೀರು ಕೊಡಿ ಎನ್ನುವುದೇ ನನ್ನ ಆಗ್ರಹವಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಹಲವು ಕಿಂಡಿ ಅಣೆಕಟ್ಟೆ ನಿರ್ಮಾಣ ಆಗಿರುವುದು ನನ್ನ ಅಧಿಕಾರಾವಧಿಯಲ್ಲಿ. ರಾಜಕೀಯ ಬೇಧ ಮರೆತು ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದೇನೆ. ಕಾಂಗ್ರೆಸ್ ಪಕ್ಷ ಮುಗಿಸುವ ಬಿಜೆಪಿ ಹುನ್ನಾರ ಫಲಿಸುವುದಿಲ್ಲ ಎಂದು ಹೇಳಿದರು.
ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ, ಸಮಾಜಮುಖಿ ವ್ಯಕ್ತಿಗಳ ವಿರುದ್ಧ ಪದೇ ಪದೇ ಟೀಕೆ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶದಂತೆ ಆರಂಭವಾಗಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಸಮಿತಿ ವರದಿ ನೀಡಿ ಸಮಸ್ಯೆ ಬಗೆಹರಿಯುವವರೆಗೂ ಕಾಮಗಾರಿಗೆ ಸಂಬಂಧಿಸಿದ ಬಿಲ್ ಪಾವತಿ ಮಾಡಬಾರದು ಎಂದು ಒತ್ತಾಯಿಸಿದರು.
ಸಂಸದ ರಾಘವೇಂದ್ರ ಅವರ ಮೇಲೆ ಒತ್ತಡ ತಂದು ಬೆರಳೆಣಿಕೆಯ ಜನರಿಗೆ ಮಾತ್ರ ಉಪಯೋಗ ಮಾಡಲು ಸಿದ್ದಾಪುರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಯೋಜನೆಯ ಮೇಲ್ಭಾಗದ ಕಾಮಗಾರಿಗೆ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಅವಶ್ಯಕತೆ ಇಲ್ಲ ಎನ್ನುವ ಅಧಿಕಾರಿಗಳು, ಯೋಜನೆಯ ಕೆಳ ಭಾಗಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಬೇಕು ಎಂದು ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕ್ಷೇತ್ರದ ಜನರ ಅಹವಾಲಿಗೆ ಸ್ಪಂದಿಸಿದ ಗೋಪಾಲ ಪೂಜಾರಿ ಅವರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಮೂಲ ಯೋಜನೆಯಲ್ಲಿ ಬಿಟ್ಟು ಹೋದ ಪ್ರದೇಶಗಳಿಗೂ ನೀರು ದೊರಕಬೇಕು ಎನ್ನುವ ಆಗ್ರಹ ನಮ್ಮದು. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಗುತ್ತಿಗೆದಾರನಿಂದಲೇ ಸಮಸ್ಯೆ ಸೃಷ್ಟಿಯಾಗಿದೆ ಎಂದು ದೂರಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಪಶ್ಚಿಮವಾಹಿನಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ್ ಹೆಗ್ಡೆ , ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮೆಂಡನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ ಶ್ರೀಯಾನ್ ಮಾತನಾಡಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ ಪಡುಕೋಣೆ, ಜಿ.ಪಂ.ಮಾಜಿ ಸದಸ್ಯರಾದ ಸದಾನಂದ ಬಳ್ಕೂರು, ಜ್ಯೋತಿ ನಾಯ್ಕ್, ಪ್ರಮುಖರಾದ ಸಂತೋಷ ಶೆಟ್ಟಿ ಹಕ್ಲಾಡಿ, ಬಿಜೂರು ರಘುರಾಮ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಅನಂತ ಮೊವಾಡಿ, ಸುದೇಶ್ ಶೆಟ್ಟಿ ಗುಲ್ವಾಡಿ, ಜಯರಾಂ ನಾಯ್ಕ್, ಜಿ.ಮೊಹಮ್ಮದ್, ರತ್ನಾಕರ್ ಶೆಟ್ಟಿ ಮಧುರಬಾಳು, ವಾಸುದೇವ ಯಡಿಯಾಳ, ಕಾಂಗ್ರೆಸ್ ಐಟಿ ಸೆಲ್‌ನ ಚಂದ್ರಶೇಖರ ಶೆಟ್ಟಿ, ನಾಗಪ್ಪ ಕೊಠಾರಿ, ಕಾಳಿಂಗ್ ಶೆಟ್ಟಿ , ಸುರೇಶ್ ಶೆಟ್ಟಿ ಗುಲ್ವಾಡಿ, ಪ್ರಭಾಕರ ಆನಗಳ್ಳಿ, ವಿಜಯ್ ಪುತ್ರನ್ ಸೇರಿದಂತೆ ವಾರಾಹಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದ ಗ್ರಾಮ ಪಂಚಾಯಿತಿಗಳ ರೈತರು, ಸೌಕೂರು ಏತ ನೀರಾವರಿ ಫಲಾನುಭವಿಗಳು, ಕುಂದಾಪುರ ವ್ಯಾಪ್ತಿಯ ಕುಡಿಯುವ ನೀರಿನ ಫಲಾನುಭವಿಗಳು ಪಾಲ್ಗೊಂಡಿದ್ದರು.
ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ರಾಘವೇಂದ್ರ ನೇಂಪು ಕಾರ್ಯಕ್ರಮ ನಿರೂಪಿಸಿದರು.
ನಾನು ಕೃಷಿಯನ್ನು ಮಾಡಿರುವ ಪಕ್ಕಾ ರೈತ. ನಾನು ಹಸಿರು ಶಾಲಿನ ರೈತ ಅಲ್ಲ.ಸಂಪಿಗೇಡಿ ಸಂಜೀವ ಶೆಟ್ಟಿ. ರೈತ ಮುಖಂಡ
ಸತ್ಯ ಹೇಳಲು ಯಾವ ಅಂಜಿಕೆ ನನಗಿಲ್ಲ. ಯೋಜನೆ ನಿಲ್ಲಿಸುತ್ತಾರೆ ಎಂದು ಅಪಾದನೆ ಮಾಡುವ ಶಾಸಕ ಗುರುರಾಜ ಗಂಟಿಹೊಳೆ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುವೆ. ಇಲ್ಲದಿದ್ದಲ್ಲಿ ಅವರು ಸನ್ಯಾಸ ಸ್ವೀಕರಿಸುವರಾ?ಕೆ.ಗೋಪಾಲ ಪೂಜಾರಿ ಬೈಂದೂರು ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.