ADVERTISEMENT

ಕುಂದಾಪುರ: ಬೇಸಿಗೆಯಲ್ಲಿ ಖಾಲಿ ಕೊಡಗಳ ಶಬ್ದ

ನೀರಿನ ಬೇಡಿಕೆ ಪೂರೈಸಲು ಅಧಿಕಾರಿಗಳ ಪ್ರಯತ್ನ

ಕೆ.ಸಿ.ರಾಜೇಶ್‌
Published 19 ಏಪ್ರಿಲ್ 2025, 5:31 IST
Last Updated 19 ಏಪ್ರಿಲ್ 2025, 5:31 IST
ನೀರಿಗಾಗಿ ಕಾದಿರುವ ಖಾಲಿ ಕೊಡಗಳು
ನೀರಿಗಾಗಿ ಕಾದಿರುವ ಖಾಲಿ ಕೊಡಗಳು   

ಕುಂದಾಪುರ: ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯಲು, ಬಟ್ಟೆ ತೊಳೆಯಲು, ಸ್ವಚ್ಛತೆ, ಕೃಷಿ, ಜಾನುವಾರು ಸೇರಿದಂತೆ ಜನರ ನಿತ್ಯ ಅಗತ್ಯಕ್ಕೆ ಬೇಕಾಗುವ ಹನಿ ನೀರಿಗೂ ದುಸ್ತರ ಎನ್ನುವ ಸ್ಥಿತಿ ಎದುರಾಗಿದೆ. 

ತಾಲ್ಲೂಕಿನ ತ್ರಾಸಿ, ವಂಡ್ಸೆ, ಕೊರ್ಗಿ, ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಲಾಗುತ್ತಿದೆ. ‘ನಮ್ಮೂರಿಗೂ ಟ್ಯಾಂಕರ್ ನೀರು ಬೇಕು’ ಎನ್ನುವವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಕಳೆದ ಬಾರಿ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಕುಂದಾಪುರ ಸೇರ್ಪಡೆಯಾಗಿರಲಿಲ್ಲ. ಈ ಕಾರಣದಿಂದ ವಿಶೇಷ ಅನುದಾನದ ಬಂದಿರಲಿಲ್ಲ. ಕುಂದಾಪುರ ಹಾಗೂ ಬೈಂದೂರಿನ ಶಾಸಕರು ಈ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರಾದರೂ, ಪ್ರಯೋಜನವಾಗಿರಲಿಲ್ಲ. ಒಟ್ಟು 756 ಮನೆಗಳ 3,814 ಸದಸ್ಯರಿಗೆ 2,305 ಟ್ರಿಪ್‌ಗಳಲ್ಲಿ ಟ್ಯಾಂಕರ್‌ ನೀರು ವಿತರಿಸಲಾಗಿದೆ. ಸದ್ಯ ಕಳೆದ ಬಾರಿಯ ಪಟ್ಟಿಯ ಆಧಾರದಲ್ಲಿಯೇ ಯೋಜನೆಗಳು ಕಾರ್ಯಗತವಾಗುತ್ತಿವೆ. ಈ ಬಾರಿಯೂ ತಾಲ್ಲೂಕಿಗೆ ವಿಶೇಷ ಅನುದಾನ ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ತ್ರಾಸಿ, ನಾಯಕವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ, ಪರಿಹಾರಕ್ಕೆ ಯಾವ ಕಾರ್ಯವೂ ನಡೆದಿಲ್ಲ. ತಾಲ್ಲೂಕಿನ ಹಲವೆಡೆ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ನಡೆಯುತ್ತಿದ್ದರೂ, ಇದರ ಉಪಯೋಗ ಕ್ಷೇತ್ರದ ಜನರಿಗೆ ಲಭಿಸಿಲ್ಲ. ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ನೀರಿನ ಸಮಸ್ಯೆಗೆ ವರಾಹಿ ಯೋಜನೆ ವರದಾನವಾಗುತ್ತದೆ ಎಂದು ನಂಬಿದ್ದ ಜನರಿಗೆ, ಯೋಜನೆ ಗಗನ ಕುಸುಮವಾಗುತ್ತಿದೆ.

ಗ್ರಾಮ ಪಂಚಾಯಿತಿ ಸರಬರಾಜು ಮಾಡುವ ನೀರು, ಬೇಡಿಕೆಗೆ ಅನುಗುಣವಾಗಿ ದೊರಕದೆ ಇದ್ದಾಗ ಸ್ವಂತ ಹಣ ನೀಡಿ ಖಾಸಗಿಯವರಿಂದ ನೀರು ಖರೀದಿ ಮಾಡುವ ಅನಿವಾರ್ಯತೆಗೆ ಜನರು ಒಗ್ಗಿ ಹೋಗಿದ್ದಾರೆ. 1 ಸಾವಿರ ಲೀ.ಗೆ ₹450 ರಂತೆ ಪಾವತಿಸಿ ಟ್ಯಾಂಕರ್ ಮೂಲಕ ನೀರು ತರಿಸುತ್ತಾರೆ.

ಜನಪ್ರತಿನಿಧಿಗಳ ಸಭೆ: ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಎ.ಕಿರಣ್‌ಕುಮಾರ ಕೊಡ್ಗಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಉಪ ವಿಭಾಗಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್‌ರ ಮಾರ್ಗದರ್ಶನದಲ್ಲಿ ಅಗತ್ಯ ಇರುವ ಕಡೆಗೆ ನೀರು ಸರಬರಾಜು ಮಾಡುವ ಕುರಿತು ಕಾರ್ಯ ಯೋಜನೆ ರೂಪಿಸಲಾಗಿದೆ.

‘ಸರ್ಕಾರದ ಮಾರ್ಗಸೂಚಿಯಂತೆ ನೀರು ಸರಬರಾಜು ಟ್ಯಾಂಕರ್‌ಗೆ ಪರಿಷ್ಕೃತ ದರ ನಿಗದಿ ಮಾಡಲಾಗುತ್ತದೆ. ಅಗತ್ಯವಿರುವ ಕಡೆಗೆ ನೀರು ಸರಬರಾಜಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಹುಕ್ಕೇರಿ.

ಉಭಯ ತಾಲ್ಲೂಕುಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದ್ದು ಹಲವು ಸಭೆ ನಡೆಸಲಾಗಿದೆ
ಗುರುರಾಜ್ ಗಂಟಿಹೊಳೆ ಶಾಸಕ ಬೈಂದೂರು
ಜನವರಿ ತಿಂಗಳ ಅಂತ್ಯದ ವೇಳೆಗೆ ನೀರಿನ ಮೂಲಗಳು ಬತ್ತಿ ಹೋಗುವುದರಿಂದ ಜನ ಹಾಗೂ ಜಾನುವಾರುಗಳಿಗೆ ನೀರಿನ ಕೊರತೆ ಕಾಣಿಸುತ್ತದೆ. ಸರ್ಕಾರದ ಆದ್ಯತೆ ನೆಲೆಯಲ್ಲಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು
ಉಮೇಶ್ ಶೆಟ್ಟಿ ಕಲ್ಗದ್ದೆ ಮಾಜಿ ಸದಸ್ಯ ತಾ.ಪಂ.
ಮಳೆಗಾಲದಲ್ಲಿ ಪೈಪ್ ಒಡೆಯಿತು ಎನ್ನುವ ಕಾರಣ ಬೇಸಿಗೆಯಲ್ಲಿ ಹೇಗೂ ನೀರಿಲ್ಲ... ನಮಗಂತೂ ವರ್ಷಪೂರ್ತಿ ನೀರೇ ಕೊಡುವುದಿಲ್ಲ. ಹಣ ಕೊಟ್ಟು ನೀರು ಖರೀದಿಸಿ ಹೈರಾಣಾಗಿದ್ದೇವೆ
ನವೀನ್ ತ್ರಾಸಿ ನಿವಾಸಿ

ಕೊಳವೆ ಮೂಲಕ ನೀರು ಪೂರೈಕೆ

ಕಳೆದ ಕೆಲ ವರ್ಷಗಳಿಂದ ವರಾಹಿ ನೀರನ್ನು ಸಂಗ್ರಹಿಸಿ ಜಪ್ತಿಯಲ್ಲಿನ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕೊಳವೆ ಮೂಲಕ ಕುಂದಾಪುರ ಪುರಸಭೆ ಹಾಗೂ ಆಸುಪಾಸಿನ ಕೆಲ ಗ್ರಾಮ ಪಂಚಾಯಿತಿಗಳಿಗೆ ಸರಬರಾಜು ಮಾಡುತ್ತಿರುವುದರಿಂದ ಈ ಭಾಗಗಳಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆ ಕಂಡು ಬರುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.