
ಉಡುಪಿ: ಲಿಂಗಾಯತ ಧರ್ಮವು ಹಿಂದೂ ಧರ್ಮ, ಸನಾತನ ಧರ್ಮದ ಒಂದು ಭಾಗವಲ್ಲ. ಅದು ಸ್ವತಂತ್ರ ಧರ್ಮ. ಬಸವಣ್ಣನೇ ಅದಕ್ಕೆ ಧರ್ಮಗುರು, ವಚನಗಳೇ ಧರ್ಮಗ್ರಂಥ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಹೇಳಿದರು.
‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ದ ವತಿಯಿಂದ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಉಡುಪಿಯ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಯಾವುದೇ ಧರ್ಮವು ಧರ್ಮ ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಸಿದ್ಧಾಂತ, ಸಾಧನೆ, ಧರ್ಮಗುರು, ಧರ್ಮಗ್ರಂಥ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಬುದ್ಧ ಕೊಟ್ಟಿದ್ದು ಹೇಗೆ ಬೌದ್ಧ ಧರ್ಮವೋ, ಮಹಾವೀರ ಕೊಟ್ಟಿದ್ದು ಹೇಗೆ ಜೈನ ಧರ್ಮವೋ ಹಾಗೆಯೇ ಬಸವಣ್ಣ ಕೊಟ್ಟಿದ್ದು ಲಿಂಗಾಯತ ಧರ್ಮ ಎಂದರು.
ವೀರಶೈವ ಮತ್ತು ಲಿಂಗಾಯತ ಸ್ವಾಮಿಗಳ ನಡುವೆ ಭೇದಭಾವ ಸರಿಯೇ ಎಂದು ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾಲ್ಕಿ ಶ್ರೀ, ಬಸವಣ್ಣನವರ ಕಾಲದಲ್ಲಿ ಅನೇಕರು ಅವರ ಬಳಿ ಬಂದು ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಲಿಂಗಾಯತ ಧರ್ಮಕ್ಕೆ ಬಂದರು. ವೀರಶೈವರೂ ಹಾಗೆಯೇ ಬಂದವರು. ಆದರೆ, ಅವರು ಬಸವಣ್ಣನವರನ್ನು ಗುರು ಎಂದು ಒಪ್ಪಿಕೊಳ್ಳುವುದಿಲ್ಲ. ವಚನ ಸಾಹಿತ್ಯವನ್ನು ಧರ್ಮ ಗ್ರಂಥವೆಂದೂ ಒಪ್ಪಿಕೊಳ್ಳುವುದಿಲ್ಲ. ಅದನ್ನು ಒಪ್ಪಿಕೊಂಡರೆ ಅವರೂ ನಮ್ಮವರೇ ಎಂದು ಹೇಳಿದರು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ಯಾಕೆ ಮಾಡುತ್ತೀರಿ ? ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾಲ್ಕಿ ಶ್ರೀ, ಸಂವಿಧಾನಬದ್ಧವಾಗಿ ನಮ್ಮ ಧರ್ಮಕ್ಕೆ ಏನು ಸಿಗಬೇಕೋ ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹಕ್ಕನ್ನು ಕೇಳಲು ಹೋರಾಟ ಮಾಡುತ್ತಿದ್ದೇವೆ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ್ಯ ಧರ್ಮದ ಮಾನ್ಯತೆ ನೀಡಬೇಕು ಎಂದರು.
ಬಸವಣ್ಣ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಹಾಗೆಯೇ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ವಚನದ ಬೆಳಕು ಇರುತ್ತದೋ ಅಲ್ಲಿ ಜಾತೀಯತೆಯ ಕತ್ತಲು ಇರುವುದಿಲ್ಲ. ಇನ್ನೂ ಜಾತೀಯತೆ ಇದೆ ಎಂದರೆ ವಚನದ ಆಶಯವನ್ನು ನಾವು ಅಳವಡಿಸಿಕೊಂಡಿಲ್ಲ ಎಂದರ್ಥ. ವಚನದ ಆಶಯವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಾತೀಯತೆ ಅಳಿದು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಶೇಗುಣಿಸಿ ಮಹಾಂತ ಪ್ರಭು ಸ್ವಾಮಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಷಣ್ಮುಖ ಶಿವಯೋಗಿಗಳ ಮಠದ ವೀರಸಿದ್ಧ ದೇವರು, ಶಿವಬಸವ ದೇವರು, ಗುರುಬಸವ ಪಟ್ಟದ್ದೇವರು ಭಾಗವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ನಿರಂಜನ ಚೋಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಭಿಯಾನದ ಅಂಗವಾಗಿ ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಪುರಭವನದ ವರೆಗೆ ಸಾಮರಸ್ಯದ ನಡಿಗೆ ವಚನ ರಥದೊಂದಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.