ADVERTISEMENT

ಕರಾವಳಿಯ ನಗರ ಪ್ರದೇಶದಲ್ಲೂ ಕಂಡು ಬರುತ್ತಿವೆ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌

ನವೀನ್ ಕುಮಾರ್ ಜಿ.
Published 1 ಅಕ್ಟೋಬರ್ 2025, 7:13 IST
Last Updated 1 ಅಕ್ಟೋಬರ್ 2025, 7:13 IST
ಉಡುಪಿ ನಗರ ವ್ಯಾಪ್ತಿಯಲ್ಲಿ ಕಂಡು ಬಂದ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌
ಉಡುಪಿ ನಗರ ವ್ಯಾಪ್ತಿಯಲ್ಲಿ ಕಂಡು ಬಂದ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌   

ಉಡುಪಿ: ದಟ್ಟ ಕಾನನಗಳಲ್ಲಿ ಹೆಚ್ಚಾಗಿ ಕಂಡು ಬರುವ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌ (ಮಂಗಟ್ಟೆ) ಹಕ್ಕಿಗಳು ಉಡುಪಿ ನಗರ ಪ್ರದೇಶದಲ್ಲೂ ಆಗಾಗ ಕಂಡು ಬರುವ ಮೂಲಕ ಪ್ರಕ್ಷಿ ಪ್ರೇಮಿಗಳಿಗೆ ಮುದ ನೀಡುತ್ತಿವೆ.

ನಗರದ ಬ್ರಹ್ಮಗಿರಿ, ಅಂಬಲಪಾಡಿ ಮೊದಲಾದೆಡೆ ಎತ್ತರದ ಮರಗಳಲ್ಲಿ ಆಗಾಗ ಕಾಣಸಿಗುವ ಈ ಹಕ್ಕಿಗಳ ಗುಂಪು ನಗರವಾಸಿಗಳ ಗಮನ ಸೆಳೆಯುತ್ತಿವೆ.

ಉಡುಪಿ ಜಿಲ್ಲೆಯಲ್ಲಿ ಮಲಬಾರ್‌ ಪೈಡ್‌ ಹಾರ್ನ್‌ಬಿಲ್ ಕಂಡು ಬರುತ್ತಿರುವುದು ಇದೇನು ಮೊದಲಲ್ಲ. ಆದರೆ ನಗರ ಪ್ರದೇಶದೊಳಗೆ ಹೆಚ್ಚಾಗಿ ಬರುತ್ತಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಪಕ್ಷಿ ವೀಕ್ಷಕರು.

ADVERTISEMENT

ಪಶ್ಚಿಮ ಘಟ್ಟದ ಕಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌ ನಗರ ಪ್ರದೇಶದತ್ತ ಮುಖ ಮಾಡಿರುವುದು ಪಕ್ಷಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಬಾಗಿದ, ಹಳದಿ ಮಿಶ್ರಿತ ಕೊಕ್ಕಿನ ಮೂಲಕ ಗಮನ ಸೆಳೆಯುವ ಈ ಹಕ್ಕಿಗಳು ನಿತ್ಯಹರಿದ್ವರ್ಣ ಮತ್ತು ತೇವಾಂಶಭರಿತ, ಎಲೆ ಉದುರುವ ಕಾಡುಗಳಲ್ಲಿ, ನದಿಗಳ ದಡದಲ್ಲಿ ಕಂಡುಬರುತ್ತವೆ. ಹಣ್ಣುಗಳು, ಸಣ್ಣ ಪ್ರಾಣಿಗಳು, ಕೀಟಗಳು ಮತ್ತು ಹಲ್ಲಿಗಳನ್ನು ಇವು ತಿನ್ನುತ್ತವೆ. ಅಂಜೂರದ ಹಣ್ಣುಗಳನ್ನು ಇವು ಹೆಚ್ಚು ಇಷ್ಟಪಡುತ್ತವೆ.

ಗೂಡು ಕಟ್ಟುವ ಸಮಯದಲ್ಲಿ ಹೆಣ್ಣು ಪಕ್ಷಿಯು ಒಂದು ದೊಡ್ಡ ಮರದ ಪೊಟರೆಯೊಳಗೆ ಬೀಡುಬಿಡುತ್ತದೆ. ಅದು ತನ್ನ ಹಿಕ್ಕೆ ಮತ್ತು ಮಣ್ಣಿನ ಮಿಶ್ರಣದಿಂದ ಪ್ರವೇಶದ್ವಾರವನ್ನು ಮುಚ್ಚುತ್ತದೆ, ಒಂದು ಸಣ್ಣ ಬಿರುಕಿನಷ್ಟು ಮಾತ್ರ ಜಾಗ ಬಿಟ್ಟಿರುತ್ತದೆ.

ಈ ಸಮಯದಲ್ಲಿ ಗಂಡು ಪಕ್ಷಿ ಗೂಡಿಗೆ ಆಹಾರವನ್ನು ತಲುಪಿಸುತ್ತದೆ. ಮೊಟ್ಟೆಗಳು ಮತ್ತು ಮರಿಗಳ ರಕ್ಷಣೆಗಾಗಿ ಈ ಪಕ್ಷಿಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ಅರಣ್ಯನಾಶದಿಂದಾಗಿ ಈ ಹಕ್ಕಿಗಳ ಸಂಖ್ಯೆಯೂ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ತಜ್ಞರು.

‘ಉಡುಪಿಯಲ್ಲಿ ಕಂಡು ಬರುತ್ತಿರುವ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌ ಹಕ್ಕಿಗಳು ಇಲ್ಲೇ ಆವಾಸಸ್ಥಾನವನ್ನು ಕಂಡುಕೊಂಡಿರುವ ಸಾಧ್ಯತೆ ಇರುತ್ತದೆ. ದೊಡ್ಡ ಮರಗಳ ಪೊಟರೆಗಳಲ್ಲಿ ಅವುಗಳು ಮೊಟ್ಟೆ ಇಡುತ್ತಿದ್ದು, ನಗರದ ಹೊರ ವಲಯದ ದೊಡ್ಡ ಮರಗಳಲ್ಲೇ ನೆಲೆಸಿರುವ ಸಾಧ್ಯತೆ ಇದೆ’ ಎಂದು ಮಣಿಪಾಲ ಬರ್ಡಿಂಗ್ ಆ್ಯಂಡ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಟ್ರಸ್ಟಿ ತೇಜಸ್ವಿ ಎಸ್‌. ಆಚಾರ್ಯ ತಿಳಿಸಿದರು.

ಉಡುಪಿ ನಗರ ವ್ಯಾಪ್ತಿಯಲ್ಲಿ ಕಂಡು ಬಂದ ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌
ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌

‘ಉಡುಪಿಯ ಸಿಟಿ ಬಸ್‌ ನಿಲ್ದಾಣದ ಮಕ್ಕದ ಮರದಲ್ಲೂ ಈ ಹಕ್ಕಿಗಳು ಕಾಣಸಿಕ್ಕಿವೆ. ಪಕ್ಷಿ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ನಾವು ಹಲವು ಬಾರಿ ನೋಡಿದ್ದೇವೆ’ ಎಂದೂ ಅವರು ಹೇಳಿದರು.

ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌ ಹಕ್ಕಿಗಳು ಉಡುಪಿ ನಗರ ಪ್ರದೇಶದಲ್ಲೂ ಕಾಣಸಿಗುತ್ತವೆ. ಮಲಬಾರ್‌ ಗ್ರೇ ಹಾರ್ನ್‌ಬಿಲ್‌ ಹಕ್ಕಿಗಳು ಕೂಡ ಅಪರೂಪಕ್ಕೆ ಕಾಣಸಿಗುತ್ತವೆ. ಆಗುಂಬೆ ಮೊದಲಾದೆಡೆ ಮರಗಳು ನಾಶವಾಗುತ್ತಿರುವುದರಿಂದ ಇವುಗಳು ನಗರ ಪ್ರದೇಶದತ್ತ ಬರುತ್ತಿರಬಹುದು
ತೇಜಸ್ವಿ ಎಸ್‌. ಆಚಾರ್ಯ ಪಕ್ಷಿ ವೀಕ್ಷಕ

‘ಮೂರ್ನಾಲ್ಕು ವರ್ಷಗಳಿಂದ ಕಾಣಸಿಗುತ್ತಿವೆ’

ಮಲಬಾರ್‌ ಪೈಡ್‌ ಹಾರ್ನ್‌ಬಿಲ್‌ ಹಕ್ಕಿಗಳು ನಿತ್ಯಹರಿದ್ವರ್ಣ ಕಾಡುಗಳಲ್ಲೇ ಹೆಚ್ಚಾಗಿ ಕಾಣಸಿಗುತ್ತವೆ. ಹಿಂದೆ ಈ ಹಕ್ಕಿಯನ್ನು ನೋಡಲು ನಾವು ದಾಂಡೇಲಿಗೆ ಹೋಗುತ್ತಿದ್ದೆವು. ಈಗ ಮೂರ್ನಾಲ್ಕು ವರ್ಷಗಳಿಂದ ಇವುಗಳ ಗುಂಪೊಂದು ಕುಂದಾಪುರ ಉಡುಪಿ ಮೊದಲಾದೆಡೆ ನಗರ ವ್ಯಾಪ್ತಿಯಲ್ಲೇ ಕಾಣಸಿಗುತ್ತವೆ ಎನ್ನುತ್ತಾರೆ ಪಕ್ಷಿತಜ್ಞ ವಿ. ಲಕ್ಷ್ಮಿ ನಾರಾಯಣ ಉಪಾಧ್ಯ. ಈ ಹಕ್ಕಿಗಳು ಇಲ್ಲಿ ವರ್ಷವಿಡೀ ಕಾಣಸಿಗುವುದಿಲ್ಲ. ಆಗಸ್ಟ್‌ ಸೆಪ್ಟೆಂಬರ್‌ ತಿಂಗಳಲ್ಲಿ ಕಾಣಸಿಗುವ ಇವುಗಳು ಹಣ್ಣುಗಳನ್ನರಸಿ ಬರುತ್ತಿರಬಹುದು. ಪಶ್ಚಿಮ ಘಟ್ಟ ಪ್ರದೇಶಗಳಲ್ಲೂ ಮಾನವನ ಹಸ್ತಕ್ಷೇಪಗಳು ಹೆಚ್ಚಾಗುತ್ತಿದ್ದು ಈ ಕಾರಣದಿಂದಲೂ ಇವುಗಳು ಕರಾವಳಿ ಪ್ರದೇಶದತ್ತ ಬರುತ್ತಿರಬಹುದು ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.