ADVERTISEMENT

ಉಡುಪಿ | ಐಸಿಯುನಲ್ಲಿ ಮಣಿಪಾಲ ರಸ್ತೆಗಳು !

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 6:42 IST
Last Updated 31 ಜುಲೈ 2023, 6:42 IST
ಮಣಿಪಾಲದ ಶಿವಳ್ಳಿ ಕೈಗಾರಿಕಾ ವಲಯದ ರಸ್ತೆಯ ದುಸ್ಥಿತಿ
ಮಣಿಪಾಲದ ಶಿವಳ್ಳಿ ಕೈಗಾರಿಕಾ ವಲಯದ ರಸ್ತೆಯ ದುಸ್ಥಿತಿ   

ಉಡುಪಿ: ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ, ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಮೂಲಸೌಕರ್ಯಗಳಿಂದ ನರಳುತ್ತಿದೆ. ಮಣಿಪಾಲದಿಂದ ಅಲೆವೂರು ಮಾರ್ಗದ ಮುಖ್ಯರಸ್ತೆಯ ಪಕ್ಕದಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಹೊಂಡ ಗುಂಡಿಗಳು ವಾಹನ ಸವಾರರನ್ನು ಸ್ವಾಗತಿಸುತ್ತವೆ.

ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸುವಾಗ ಸಣ್ಣ ಸ್ವಿಮ್ಮಿಂಗ್ ಫೂಲ್‌ನಲ್ಲಿ ಸಂಚರಿಸಿದಂತಹ ಅನುಭವವಾಗುವುದು ಖಚಿತ. ರಸ್ತೆಯಲ್ಲಿ ಹೊಂಡಗಳಿವೆಯೋ ಅಥವಾ ಹೊಂಡಗಳಲ್ಲಿಯೇ ರಸ್ತೆ ಇದೆಯೋ ಎಂಬ ಅನುಮಾನ ಕಾಡದಿರದು. 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶಿವಳ್ಳಿ ಕೈಗಾರಿಕಾ ವಲಯದಲ್ಲಿ 90ಕ್ಕೂ ಹೆಚ್ಚು ಸಂಸ್ಥೆಗಳು ನೆಲೆಯೂರಿವೆ.

56 ಕೈಗಾರಿಕಾ ಶೆಡ್‌ಗಳಿದ್ದು ಪ್ರತಿನಿತ್ಯ ಸಾವಿರಾರು ಭಾರಿ ಸರಕು ಸಾಗಣೆ ವಾಹನಗಳು ಸೇರಿದಂತೆ ದ್ವಿಚಕ್ರ, ತ್ರಿಚಕ್ರ, ಹಾಗೂ ನಾಲ್ಕುಚಕ್ರದ ವಾಹನಗಳು ಸಂಚರಿಸುತ್ತವೆ. ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹಾಳಾಗಿವೆ. ರಸ್ತೆಯಲ್ಲಿ ಸಾಗುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅವಘಡಗಳು ಖಚಿತ. ಒಂದು ಅಡಿಗೂ ಆಳವಾದ ದೈತ್ಯ ಗುಂಡಿಗಳು ಬಲಿಗಾಗಿ ಬಾಯ್ತೆರೆದು ನಿಂತಿರುವಂತೆ ಭಾಸವಾಗುತ್ತವೆ.

ADVERTISEMENT
ಕೈಗಾರಿಕಾ ವಲಯದ ರಸ್ತೆಗಳ ಹೊಂಡ ಗುಂಡಿ ನೋಡಿ ಬಾಡಿಗೆ ಹೋಗಲು ಭಯವಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಗ್ಯಾರೇಜ್‌ಗೆ ಹೋಗುವುದು ಖಚಿತ.
ಶ್ರೀನಿವಾಸ್‌, ಆಟೋ ಚಾಲಕ

ಪ್ರತಿವರ್ಷ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ತೆರಿಗೆ ತುಂಬುವ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾಗೆ ಕನಿಷ್ಠ ರಸ್ತೆ, ಚರಂಡಿ, ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಮಾಡದ ಸ್ಥಳೀಯ ಆಡಳಿತದ ಬಗ್ಗೆ ಕೈಗಾರಿಕೋದ್ಯಮಿಗಳಲ್ಲಿ ಅಸಮಾಧಾನವಿದೆ. ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ಸರಕು ಸಾಗಣೆ ವಾಹನಗಳು ಬಾಡಿಗೆ ಬರಲು ಹಿಂದೇಟು ಹಾಕುತ್ತವೆ. ಬಂದರೂ ಹೆಚ್ಚಿನ ಬಾಡಿಗೆ ಕೊಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಉದ್ಯಮಿ ವಿಶ್ವರಾಜ್‌.

ಸರಕು ತುಂಬಿಕೊಂಡು ಹೋಗುವಾಗ ಜಾಗ್ರತೆಯಿಂದ ವಾಹನಗಳನ್ನು ಓಡಿಸಬೇಕು. ಅಪ್ಪಿತಪ್ಪಿ ಗುಂಡಿಗಳಿಗೆ ವಾಹನ ಇಳಿದರೆ ಆಕ್ಸೆಲ್, ಶಾಕ್ ಅಬ್ಸರ್ವರ್‌ ಕಟ್ ಆಗುತ್ತದೆ. ಕೆಲವೊಮ್ಮೆ ವಾಹನವೇ ಪಲ್ಟಿಯಾಗಿದ್ದುಂಟು. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡು ಗುಂಡಿಗಳು ಸಹ ಕಾಣುವುದಿಲ್ಲ. ಈ ಸಂದರ್ಭ ಹೆಚ್ಚು ಅವಘಡಗಳು ಸಂಭವಿಸುತ್ತವೆ ಎನ್ನುತ್ತಾರೆ ಚಾಲಕ ಮೋಹನ್‌.

ಪ್ರತಿ ತಿಂಗಳು 30,000ದಷ್ಟು ಬಾಡಿಗೆ ಸಿಗುತ್ತದೆ. ದುಡಿದ ಹಣದಲ್ಲಿ ಅರ್ಧದಷ್ಟು ವಾಹನಗಳ ದುರಸ್ತಿಗೆ, ಇಂಧನಕ್ಕೆ ವ್ಯಯವಾಗುತ್ತದೆ. ಗುಂಡಿ ಮುಚ್ಚಿ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಿಸಿದರೆ ಸರಕು ಸಾಗಣೆ ವಾಹನಗಳ ಚಾಲಕರು ನೆಮ್ಮದಿಯ ಜೀವನ ನಡೆಸಬೇಹುದು ಎನ್ನುತ್ತಾರೆ ಚಾಲಕ ಮಹದೇವ್‌.

ಮಣಿಪಾಲ ನಗರ ಗುಂಡಿಮಯ

ಅಂಬಾಗಿಲಿನಿಂದ ಮಣಿಪಾಲ–ಪೆರಂಪಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದ್ದು ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಿಲ್ಲ. ಈ ಭಾಗದಲ್ಲಿ ದೊಡ್ಡ ಗುಂಡಿಗಳು ಬಾಯ್ತೆರೆದಿದ್ದು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಮಣಿಪಾಲ–ಅಲೆವೂರು ಮುಖ್ಯ ರಸ್ತೆಯೂ ಹದಗೆಟ್ಟಿದ್ದು ಅಲಲ್ಲಿ ಗುಂಡಿಗಳು ಬಿದ್ದಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯ ಎದುರಿಗೆ ರಸ್ತೆ ಅಗೆದು ಬಿಡಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಜಿಲ್ಲೆಯ ಆರ್ಥಿಕತೆಗೆ ಶಕ್ತಿತುಂಬುತ್ತಿರುವ ಕೈಗಾರಿಕಾ ವಲಯದ ನಿರ್ಲಕ್ಷ್ಯ ಸಲ್ಲದು; ಕನಿಷ್ಠ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಲಿದೆ.
ವಿರಾಜ್‌, ಉದ್ಯಮಿ

ಮಣಿಪಾಲದ ಕಾಯಿನ್ ಸರ್ಕಲ್‌ ಸುತ್ತ ಹಾಗೂ ಕಸ್ತೂರಬಾ ಮೆಡಿಕಲ್ ಕಾಲೇಜು ಎದುರಿಗಿನ ರಸ್ತೆಯೂ ಗುಂಡಿ ಮಯವಾಗಿದ್ದು ಸವಾರರ ಪಾಲಿಗೆ ಸವಾಲಿನ ಹಾದಿಯಾಗಿ ಪರಿಣಮಿಸಿದೆ. ಕೆಲವು ಕಡೆಗಳಲ್ಲಿ ತಾತ್ಕಾಲಿಕವಾಗಿ ಗುಂಡಿಗೆ ತುಂಬಿಸಿರುವ ಜಲ್ಲಿಕಲ್ಲುಗಳು ಮಳೆಯ ಅಬ್ಬರಕ್ಕೆ ರಸ್ತೆಯ ತುಂಬೆಲ್ಲ ಹರಡಿಕೊಂಡಿದ್ದು ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಬೈಕ್‌ ಸವಾರರು ನಿಯಂತ್ರಣ ತಪ್ಪಿ ಬಿದ್ದು ಅಪಘಾತ ಮಾಡಿಕೊಳ್ಳುತ್ತಿದ್ದಾರೆ.

ಬ್ರಹ್ಮಗಿರಿ ಸರ್ಕಲ್‌ನಿಂದ ನಾಯರ್‌ಕೆರೆಗೆ ಸಾಗುವ ರಸ್ತೆಯೂ ಹಾಳಾಗಿದ್ದು ಗುಂಡಿಗಳಿಂದ ತುಂಬಿಕೊಂಡಿದೆ. ಅಂಬಲಪಾಡಿ, ಕೃಷ್ಣಮಠದ ಸುತ್ತಮುತ್ತಲಿನ ರಸ್ತೆಗಳು, ಇಂದ್ರಾಳಿ, ಲಕ್ಷ್ಮೀಂದ್ರ ನಗರದ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ.

ಸಣ್ಣ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು ಸಂಜೆ ಮನೆಗೆ ಹೋಗುವಾಗ ಎಚ್ಚರದಿಂದ ನಡೆಯಬೇಕು. ಮೊಬೈಲ್‌ನಲ್ಲಿ ಮಾತನಾಡುತ್ತ ಮೈಮರೆತರೆ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಗುತ್ತದೆ.
ಶಾರದಾ, ಕಾರ್ಮಿಕ ಮಹಿಳೆ

169 ಎ ಉಡುಪಿ–ಮಣಿಪಾಲದ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಪಾರ್ಕಿಂಗ್‌ ಹಾಗೂ ಪಾದಚಾರಿ ಮಾರ್ಗಕ್ಕೆ ಹಾಕಲಾಗಿರುವ ಸ್ಲಾಬ್‌ಗಳು ಕಿತ್ತುಬಂದಿವೆ. ಹೆದ್ದಾರಿಯಲ್ಲಿ ಸಾಗುವ ವಾಹನಗಳು ಅಪ್ಪಿತಪ್ಪಿ ರಸ್ತೆಯ ಅಂಚು ಬಿಟ್ಟು ಕೆಳಗಿಳಿದರೆ ಅವಘಡಗಳು ಖಚಿತ. ರಸ್ತೆಯ ಬದಿಯಲ್ಲಿಯೇ ಮ್ಯಾನ್‌ಹೋಲ್‌ಗಳಿದ್ದು ಕೆಲವ ರಸ್ತೆಯಿಂದ ಅರ್ಧ ಅಡಿ ಕೆಳಗಿದ್ದರೆ, ಕೆಲವು ರಸ್ತೆಗಿಂತ ಅರ್ದ ಅಡಿ ಮೇಲ್ಪಾಗಕ್ಕೆ ಬಂದಿವೆ.

ಮಲ್ಪೆ ರಸ್ತೆಯ ದುಸ್ಥಿತಿ

ರಸ್ತೆ ವಿಸ್ತರಣೆಯ ನೆಪದಲ್ಲಿ ಮಲ್ಪೆ ಹೆದ್ದಾರಿಯ ಗುಂಡಿಗಳಿಗೆ ಹಲವು ವರ್ಷಗಳಿಂದ ಮುಕ್ತಿ ಸಿಕ್ಕಿಲ್ಲ. ಹೆದ್ದಾರಿ ನಿರ್ಮಾಣ ಮಾಡಲು ರಸ್ತೆ ಬದಿಯ ನೂರಾರು ಮರಗಳನ್ನು ಕಡಿದು ಹಾಕಿರುವುದು ಬಿಟ್ಟರೆ ಕಾಮಗಾರಿ ಪ್ರಗತಿ ಕಂಡಿಲ್ಲ. ಹೊಸ ರಸ್ತೆ ನಿರ್ಮಾಣವಾಗಲಿದೆ ಎಂಬ ಆಶಾಭಾವದೊಂದಿಗೆ ನಾಲ್ಕೈದು ವರ್ಷಗಳಿಂದ ಗುಂಡಿಬಿದ್ದ ರಸ್ತೆಗಳಲ್ಲಿಯೇ ಸವಾರರು ಸಂಚರಿಸುತ್ತಿದ್ದಾರೆ.

ಕರಾವಳಿ ಜಂಕ್ಷನ್‌ನಿಂದ ಆರಂಭವಾಗಿ ಮಲ್ಪೆ ನಗರ ಮುಟ್ಟುವ ಸುಮಾರು 5 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿ ವಾಹನಗಳು ಇದೇ ರಸ್ತೆಯಲ್ಲಿ ಮಲ್ಪೆ ಬೀಚ್‌ಗೆ ತೆರಳುತ್ತವೆ. ನೂರಾರು ಮೀನು ಸಾಗಣೆ ವಾಹನಗಳು ಓಡಾಡುತ್ತವೆ. ಆದರೂ ಕನಿಷ್ಠ ಗುಂಡಿ ಮುಚ್ಚುವ ಕಾರ್ಯವೂ ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರಾದ ಸುಂದರ್ ಕಲ್ಮಾಡಿ.

ಸಾವಿರಾರು ಉದ್ಯೋಗ ಸೃಷ್ಟಿ

1980ರಲ್ಲಿ ಸ್ಥಾಪನೆಯಾದ ಶಿವಳ್ಳಿ ಕೈಗಾರಿಕಾ ಪ್ರದೇಶ ಮೂಲಸೌಕರ್ಯಗಳಿಂದ ನರಳುತ್ತಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಬೇಕಾದ ಯಂತ್ರೋಪರಣಗಳು ಕಚ್ಛಾವಸ್ತುಗಳು ಇಲ್ಲಿ ತಯಾರಾಗುತ್ತವೆ. ಸಾವಿರಾರು ಮಂದಿಗೆ ಉದ್ಯೋಗ ದೊರೆತಿದೆ. ಕೈಗಾರಿಕಾ ಪ್ರದೇಶಕ್ಕೆ ಕನಿಷ್ಠ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಲ್ಲ.

ಹೆದ್ದಾರಿ: ಸಾವಿನ ರಹದಾರಿ

ರಾಷ್ಟ್ರೀಯ ಹೆದ್ದಾರಿ 66 ಅವ್ಯವಸ್ಥೆಯ ಆಗರವಾಗಿದೆ. ಮಳೆಗಾಲಕ್ಕೆ ಮುನ್ನ ಗುಂಡಿಗಳನ್ನು ಮುಚ್ಚದ ಪರಿಣಾಮ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ವೇಗವಾಗಿ ಸಾಗುವ ವಾಹನಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಹಿಂಬರುವ ವಾಹನಗಳು ಡಿಕ್ಕಿಯಾಗುತ್ತಿವೆ. ಕೆಲವು ವಾಹನಗಳು ಗುಂಡಿಗಳಿಗೆ ಇಳಿಸಿ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗಳಿಗೆ ಗುದ್ದಿ ಅಪಘಾತಕ್ಕೀಡಾಗುತ್ತಿವೆ.

ಗುಂಡಿ ಮುಚ್ಚಿಸಲು ಕ್ರಮ

ಉಡುಪಿಯ ಕೈಗಾರಿಕಾ ಪ್ರದೇಶಗಳ ರಸ್ತೆ ನಿರ್ವಹಣೆ ಕೆಐಎಡಿಬಿಗೆ ಸೇರಿದ್ದು ಕೂಡಲೇ ಗುಂಡಿಗಳನ್ನು ಮುಚ್ಚುವಂತೆ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗುವುದು. ಅಂಬಾಗಿಲು–ಮಣಿಪಾಲ–ಪೆರಂಪಳ್ಳಿ ಹೊಸರಸ್ತೆ ನಿರ್ಮಾಣವಾಗಿದ್ದು ಕಾಮಗಾರಿಗೆ ಬಾಕಿ ಉಳಿಯಲು ಕಾರಣ ತಿಳಿದು ಗುಂಡಿಗಳಿದ್ದರೆ ಮುಚ್ಚಿಸಲಾಗುವುದು. ಶೀಘ್ರವೇ ಹೆದ್ದಾರಿ ಪ್ರಾಧಿಕಾರದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿ 66ರ ಗುಂಡಿಗಳನ್ನು ಮುಚ್ಚು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ

ಮಣಿಪಾಲ ಕೈಗಾರಿಕಾ ವಲಯದ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಗುಂಡಿಗಳು
ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಎದುರಿಗಿನ ರಸ್ತೆಯ ಸ್ಥಿತಿ
ಅಂಬಾಗಿಲು–ಪೆರಂಪಳ್ಳಿ–ಮಣಿಪಾಲ ರಸ್ತೆಯಲ್ಲಿ ಗುಂಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.