ADVERTISEMENT

2025ರಲ್ಲಿ ಹಲವು ಖಗೋಳ ವಿಸ್ಮಯಗಳು: ಖಗೋಳ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 4:46 IST
Last Updated 3 ಜನವರಿ 2025, 4:46 IST
<div class="paragraphs"><p>ಶನಿ ಗ್ರಹ</p></div>

ಶನಿ ಗ್ರಹ

   

ಉಡುಪಿ: ‘ಅತಿ ಹೆಚ್ಚು ಸೌರ ಜ್ವಾಲೆಗಳು, ನಾಲ್ಕು ಗ್ರಹಣಗಳು, ಮೂರು ಸೂಪರ್ ಮೂನ್‌ಗಳು, ಶನಿಗ್ರಹದ ಬಳೆ ಮಾಯ ಸೇರಿದಂತೆ ಕೆಲವು ವಿಸ್ಮಯಗಳು 2025ರಲ್ಲಿ ನಡೆಯಲಿವೆ’ ಎಂದು ಖಗೋಳ ವಿಜ್ಞಾನಿ ಎ.ಪಿ. ಭಟ್ ಹೇಳಿದರು.

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಒಂದು ಗ್ರಹಣ ಮಾತ್ರ ಭಾರತಕ್ಕೆ ಗೋಚರವಾಗಲಿದೆ. ಮಾರ್ಚ್ 13/14 ಚಂದ್ರ ಗ್ರಹಣ, ಮಾರ್ಚ್‌ 29 ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟೆಂಬರ್ 7/8 ಚಂದ್ರ ಗ್ರಹಣ ಹಾಗೂ ಸೆಪ್ಟೆಂಬರ್ 21 ಪಾರ್ಶ್ವ ಸೂರ್ಯ ಗ್ರಹಣ. ಇವುಗಳಲ್ಲಿ ಭಾರತಕ್ಕೆ ಸೆಪ್ಟೆಂಬರ್ 7ರ ಚಂದ್ರಗ್ರಹಣ ಒಂದೇ ಗೋಚರವಾಗಲಿದೆ ಎಂದಿದ್ದಾರೆ.

ADVERTISEMENT

29 ವರ್ಷಕ್ಕೆ ಎರಡು ಬಾರಿ ಭೂಮಿಯಲ್ಲಿರುವವರಿಗೆ ಶನಿಗ್ರಹದ ಸುಂದರ ಬಳೆಗಳು ಕಾಣುವುದಿಲ್ಲ. ಈ ವರ್ಷದ ಮಾರ್ಚ್‌ನಿಂದ ನವೆಂಬರ್‌ವರೆಗೆ ದೂರದರ್ಶಕದಲ್ಲಿ ಶನಿಗ್ರಹದ ಬಳೆಗಳೇ ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದೇ ಇದಕ್ಕೆ ಕಾರಣ ಎಂದೂ ಹೇಳಿದ್ದಾರೆ.

ಹನ್ನೊಂದು ವರ್ಷದಲ್ಲೊಮ್ಮೆ ನಡೆಯುವ ಅತಿ ಹೆಚ್ಚು ಸೌರಜ್ವಾಲೆಗಳನ್ನು ಸೂರ್ಯ ಹೊರಹಾಕುವುದು ಕಳೆದ ವರ್ಷ ಪ್ರಾರಂಭವಾದುದು, ಈ ವರ್ಷದ ಪ್ರಾರಂಭದ ಕೆಲ ತಿಂಗಳಲ್ಲಿ ಅತಿಯಾಗಲಿದೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿ, ಅತಿ ಹೆಚ್ಚು ಸೌರಕಲೆಗಳುಂಟಾಗಲಿವೆ ಎಂದಿದ್ದಾರೆ.

ಈ ವರ್ಷ ಅಕ್ಟೋಬರ್ 7, ನವೆಂಬರ್ 5 ಮತ್ತು ಡಿಸೆಂಬರ್ 4ರಂದು ಸೂಪರ್ ಮೂನ್‌ಗಳು ಸಂಭವಿಸಿದರೆ, ಮಾರ್ಚ್ 14, ಏಪ್ರಿಲ್ 13 ಹಾಗೂ ಮೇ 12 ರಂದು ಮೈಕ್ರೊ ಮೂನ್ ಸಂಭವಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನವರಿಯಲ್ಲಿ ಮಂಗಳ, ಸೆಪ್ಟೆಂಬರ್‌ನಲ್ಲಿ ಶನಿ, ಡಿಸೆಂಬರ್‌ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿವೆ. ವಿಶೀಷವೆಂದರೆ ಸಂಜೆಯ ಆಕಾಶದಲ್ಲಿ ಜನವರಿ ಅಂತ್ಯದಲ್ಲಿ ನಾಲ್ಕು ಗ್ರಹಗಳು ಕಣ್ಣಿಗೆ ಕಾಣಿಸಲಿವೆ. ಹಾಗೆಯೇ ಫೆಬ್ರುವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುಧ, ಶುಕ್ರ, ಶನಿ, ಗುರು ಹಾಗೂ ಮಂಗಳ ಗ್ರಹಗಳೂ ಸುಂದರವಾಗಿ ಕಾಣಲಿವೆ ಎಂದು ಎ.ಪಿ. ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.