
ಪ್ರಜಾವಾಣಿ ವಾರ್ತೆ
ಕುಂದಾಪುರ: ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ನೆಪದಲ್ಲಿ ಯೋಜನೆಯ ಸ್ವರೂಪ ಹಾಗೂ ಉದ್ದೇಶವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಯೋಜನೆಯ ಹೆಸರು ಬದಲಾಯಿಸುವ ಮೂಲಕ ಮಹಾತ್ಮ ಗಾಂಧೀಜಿ ಹೆಸರನ್ನು ದೇಶದ ಜನರ ಮನಸ್ಸಿನಿಂದ ಅಳಿಸಬಹುದು ಎಂಬ ಭ್ರಮೆಯಲ್ಲಿ ಕೇಂದ್ರ ಸರ್ಕಾರ ಇದೆ. ಬದಲಾವಣೆಯಾಗಿರುವ ಯೋಜನೆಯಲ್ಲಿ ಹೊಸ ನಿಬಂಧನೆಗಳನ್ನು ಹಾಕಲಾಗಿದ್ದು ರಾಜ್ಯ ಸರ್ಕಾರ ಯೋಜನೆಯ ಒಟ್ಟು ವೆಚ್ಚದ ಶೇ.40ರಷ್ಟು ಭರಿಸಬೇಕು, ಇಂಟರ್‌ನೆಟ್ ಆಧಾರಿತ ಕೂಲಿಕಾರರ ಹಾಜರಾತಿ ಕಡ್ಡಾಯಗೊಳಿಸಬೇಕು ಮುಂತಾದವು ಬಡ ಕೂಲಿಕಾರರಿಗೆ ತೊಡಕಾಗುವ ಅವೈಜ್ಞಾನಿಕ ಅಂಶಗಳು ಎಂದು ಅವರು ದೂರಿದ್ದಾರೆ.