ಉಡುಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲನಾಗುವುದರೊಂದಿಗೆ ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಯುವ ಜನರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಲಯನ್ಸ್ ಕ್ಲಬ್ ಉಡುಪಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ - ಕುಂದಾಪುರ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ತೆಂಕನಿಡಿಯೂರು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ದೇಶಪ್ರೇಮದ ಮನೋಭಾವ ಯುವಜನರಲ್ಲಿ ಹೆಚ್ಚಿದೆ. ಇದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿ ಬೋಧಿಸ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಅದರ ಸದ್ಬಳಕೆಯನ್ನು ಪ್ರತಿಯೊಬ್ಬ ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲ್ಲೂಕು ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಲು ಸಾಧ್ಯ. ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಹಲವಾರು ಪರೀಕ್ಷೆಗಳನ್ನು ನಡೆಸಿ, ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ನೀಡಲಾಗುತ್ತದೆ. ಆದ್ದರಿಂದ ಯುವಪೀಳಿಗೆ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದರು.
ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಕಾರ್ಯದರ್ಶಿ ಗಣನಾಥ ಎಕ್ಕಾರು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ, ತೆಂಕನಿಡಿಯೂರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.
ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.
ಸಂಸದ್ ಖೇಲ್ ಮಹೋತ್ಸವ್ ವೆಬ್‌ಸೈಟ್ ಅನಾವರಣ ಮೇಜರ್ ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪನಮನ
ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅವುಗಳ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಯಶ್‌ಪಾಲ್ ಸುವರ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.