
ಹೆಬ್ರಿ: ‘ಕೃಷಿ ಬಿಟ್ಟರೆ ಜೀವನವಿಲ್ಲ. ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಹೊಸ ಪಠ್ಯಕ್ರಮ ರೂಪಿಸಿ ಪ್ರೋತ್ಸಾಹಿಸಲಿ. ಕೃಷಿಯೇ ಮುಂದೆ ಅನಿವಾರ್ಯವಾಗಲಿದ್ದು, ಗಮನ ನೀಡುವುದು ಮುಂದಿನ ಅಗತ್ಯ. ಕೃಷಿ, ರೈತರನ್ನು ಪ್ರೋತ್ಸಾಹಿಸುವ ರಾಮಕೃಷ್ಣ ಆಚಾರ್ಯರ ಕಾರ್ಯ ಮಹತ್ವದ್ದು’ ಎಂದು ಸತ್ಯನಾರಾಯಣ ಬೆಳೇರಿ ಹೇಳಿದರು.
ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುತ್ತಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ 2ನೇ ದಿನವಾದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೃಷಿ ಮಂಡಲ, ಕೃಷಿ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ರಾಮಕೃಷ್ಣ ಆಚಾರ್ ಅವರು ಕೃಷಿಗೆ ವಿಶೇಷವಾಗಿ ಆದ್ಯತೆ ನೀಡಿ ರೈತರಿಗೆ ರೈತಪೀಠ ಪ್ರಶಸ್ತಿ ನೀಡಿ ಗೌರವಿಸುವುದು ದೇಶವನ್ನು ಗೌರವಿಸಿದಂತೆ. ಇದು ಇನ್ನಷ್ಟು ಪ್ರೇರಣೆ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್, ಕುಟುಂಬಸ್ಥರು, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋದರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್, ಜ್ಯೋತಿ ಹರೀಶ್, ಗೋಪಿನಾಥ ಭಟ್ ಮುನಿಯಾಲು, ಸದಸ್ಯರು, ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಣೂತ್ ಆರ್. ಗಾಣಿಗ ನಿರೂಪಿಸಿದರು.
ಮೃತ್ಯುಂಜಯ ಹೋಮ, ಕೂಷ್ಮಾಂಡ ಯಾಗ, ಅಶ್ವಪೂಜೆ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ವಿದ್ವಾನ್ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿ ಮಾರ್ಗದರ್ಶನದಲ್ಲಿ ಎಳ್ಳಾರೆ ವಾಸುದೇವ ಭಟ್ ಸಹಯೋಗದಲ್ಲಿ ನಡೆದವು.
ಕೃಷಿ ವಿಚಾರಗೋಷ್ಠಿ
ಕೃಷಿ ವಿಚಾರಗೋಷ್ಠಿಯಲ್ಲಿ ‘ಕರಾವಳಿಯ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆ’ಗಳ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಕೃಷಿ ಲೇಖಕ ನರೇಂದ್ರ ರೈ ದೇರ್ಲ ಮಾತನಾಡಿ ನಾಗಮಂಡಲದಲ್ಲಿ ಪ್ರಪ್ರಥಮವಾಗಿ ಕೃಷಿ ವಿಚಾರ– ಕೃಷಿ ಮಂಡಲ ಮಾಡಿಸಿದ ಕೀರ್ತಿ ರಾಮಕೃಷ್ಣ ಆಚಾರ್ಯರಿಗೆ ಸಲ್ಲುತ್ತದೆ. ಈ ನೆಲದ ಎಲ್ಲಾ ಸಂಸ್ಕೃತಿಗೂ ಕೃಷಿಯೇ ಮೂಲ. ಯುವ ಸಮುದಾಯ ಕೃಷಿಯನ್ನು ಲಾಭದಾಯಕವಾಗಿ ಮಾಡಿ ಉಳಿಸಿ ಬೆಳೆಸುವ ಅನಿವಾರ್ಯತೆಯಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಮಾತನಾಡಿ ರೈತರನ್ನು ಸರ್ಕಾರ ಸೇರಿ ಎಲ್ಲರೂ ಕಡೆಗಣಿಸುತ್ತಿದ್ದಾರೆ. ಆದರೆ ಎಲ್ಲರೂ ಸೇರಿ ಗೌರವಿಸುವ ದಿನಗಳು ಹತ್ತಿರದಲ್ಲಿವೆ ಎಂದು ಹೇಳಿದರು. ‘ಯುವಜನರು ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆ’ಗಳ ಬಗ್ಗೆ ಪುತ್ತೂರು ಗ್ರಾಮಜನ್ಯ ರೈತಸಂಸ್ಥೆಯ ನಿರಂಜನ ಪೊಳ್ಯ ಮಾತನಾಡಿದರು. ‘ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವ’ದ ಬಗ್ಗೆ ಪ್ರಯೋಗಶೀಲ ಕೃಷಿಕ ಮೈರುಗ ಕುರುಡಪದವಿನ ಪ್ರವೀಣ್ ಕೇಶವ್ ಮಾತನಾಡಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಧನಂಜಯ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.