
ಯಕ್ಷಗಾನ
– ಸಾಂದರ್ಭಿಕ ಚಿತ್ರ
ಕಾರ್ಕಳ: ತಾಲ್ಲೂಕಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ’ ಇದೇ 7ರಂದು ಆಯೋಜಿಸಲಾಗಿದೆ.
ಬೆಳಿಗ್ಗೆ 9ಕ್ಕೆ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಆಚಾರ್ಯ ಉದ್ಘಾಟಿಸುವರು. ಸಂಸ್ಥೆಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಗೋಪಾಲ್ ಮುಗೇರಾಯ ಅಧ್ಯಕ್ಷತೆ ವಹಿಸುವರು. ಸಂಜೆ ಸಮಾರೋಪ ಸಮಾರಂಭದಲ್ಲಿ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಭಾಗವಹಿಸುವರು.
ಸ್ಪರ್ಧೆಯಲ್ಲಿ ಸಂಸ್ಥೆಯ ಪರಿಸರದ ಆಹ್ವಾನಿತ ಕಾಲೇಜುಗಳ ಕಲಾವಿದರು ‘ಸೌದಾಸ ಚರಿತ್ರೆ’ ಎಂಬ ಒಂದೇ ಪ್ರಸಂಗವನ್ನು ಪ್ರದರ್ಶಿಸುವರು. ಎಲ್ಲಾ ತಂಡಗಳು ಒಂದೇ ಪ್ರಸಂಗ ಪ್ರದರ್ಶಿಸುವ ಅಪರೂಪದ ನಿಯಮ ಒಳಗೊಂಡಿರುವ ಸ್ಪರ್ಧೆಯಲ್ಲಿ ನೋಂದಣಿ, ಮೌಲ್ಯಮಾಪನ ಪ್ರಕ್ರಿಯೆ ಕಾಗದರಹಿತವಾಗಿ, ಅಂತರ್ಜಾಲ ಆಧಾರಿತವಾಗಿ ನಡೆಯಲಿವೆ. ಇದರ ಮೂಲಕ ಪರಂಪರೆ, ತಂತ್ರಜ್ಞಾನಗಳ ಅಪೂರ್ವ ಸಂಗಮಕ್ಕೆ ‘ಯಕ್ಷಗವಿಷ್ಟಿ’ ವೇದಿಕೆಯಾಗಲಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಳೂಣ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರಿಂದ ತೆಂಕು– ಬಡಗು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.