ADVERTISEMENT

ರಾಜ್ಯಕ್ಕೆ 1 ಕೋಟಿ ಡೋಸ್ ಲಸಿಕೆ: ಸಂಸದ ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 7:21 IST
Last Updated 8 ಜೂನ್ 2021, 7:21 IST
ತ್ರಾಸಿಯ ಕೊಂಕಣಿ ಖಾರ್ವಿ ಭವನದಲ್ಲಿ ಸೋಮವಾರ ಸಂಸದ ಬಿ. ವೈ. ರಾಘವೇಂದ್ರ ಕೊರೊನಾ ವಾರಿಯರ್ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಿಸಿದರು.
ತ್ರಾಸಿಯ ಕೊಂಕಣಿ ಖಾರ್ವಿ ಭವನದಲ್ಲಿ ಸೋಮವಾರ ಸಂಸದ ಬಿ. ವೈ. ರಾಘವೇಂದ್ರ ಕೊರೊನಾ ವಾರಿಯರ್ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಿಸಿದರು.   

ಬೈಂದೂರು: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದೆ. ಅಧಿಕ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ತ್ರಾಸಿಯ ಕೊಂಕಣಿ ಖಾರ್ವಿ ಭವನದಲ್ಲಿ ಸೋಮವಾರ ಸೇವಾ ಭಾರತಿ ಕರ್ನಾಟಕ, ಶಿವಮೊಗ್ಗದ ಪ್ರೇರಣಾ ಎಜುಕೇಶನ್ ಟ್ರಸ್ಟ್ ಮತ್ತು ಕುಂದಾಪುರ ಎಜುಕೇಶನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಆರಂಭದಲ್ಲಿ ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹಗುರವಾಗಿ ಮಾತನಾಡಿದವರು ಇಂದು ಮುಂದೆ ನಿಂತು ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರು ಈಗ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇನ್ನು 2–3 ದಿನಗಳಲ್ಲಿ ರಾಜ್ಯಕ್ಕೆ ಒಂದು ಕೋಟಿ ಡೋಸ್ ಲಸಿಕೆ ಬರಲಿದೆ’ ಎಂದರು.

ADVERTISEMENT

‘ಈಗ ಸೋಂಕಿನ ಮೂರನೇ ಅಲೆ ಬಗ್ಗೆ ಚರ್ಚೆಯಾಗುತ್ತಿದೆ. ಅದನ್ನು ಎದುರಿಸಲು ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಯೋಜನೆ ಸಿದ್ಧಪಡಿಸಬೇಕು. ಸೇವಾ ಭಾರತಿ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವಾಗುತ್ತಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಶವಗಳ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಕೂಡ ಅತ್ಯಂತ ಶ್ಲಾಘನೀಯ’ ಎಂದು ಅವರು ಹೇಳಿದರು.

ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮತ್ತು ಆರ್‌ಎಸ್ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ಪ್ರಕಾಶ್ ಪಿ.ಎಸ್. ಶುಭ ಹಾರೈಸಿದರು. ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಇದ್ದರು. ಬಿಜೆಪಿ ಬೈಂದೂರು ಮಂಡಲ ಅದ್ಯಕ್ಷ ದೀಪಕಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ ಪೂಜಾರಿ ಜೆಡ್ಡು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.