ADVERTISEMENT

ಸೌದಿ ಪೊಲೀಸರ ವಶದಲ್ಲಿ ಹರೀಶ್‌; ರಾಯಭಾರ ಕಚೇರಿಯಿಂದ ಮಾಹಿತಿ ಪಡೆದ ಮಣಿವಣ್ಣನ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 10:49 IST
Last Updated 25 ಡಿಸೆಂಬರ್ 2019, 10:49 IST
ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿರುವ ಹರೀಶ್‌ ಬಂಗೇರ ಅವರ ಮನೆಗೆ ಮಂಗಳವಾರ ಭೇಟಿ ನೀಡಲಾಯಿತು.
ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿರುವ ಹರೀಶ್‌ ಬಂಗೇರ ಅವರ ಮನೆಗೆ ಮಂಗಳವಾರ ಭೇಟಿ ನೀಡಲಾಯಿತು.   

ಉಡುಪಿ: ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಸಂದೇಶ ಹಾಕಿದ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿರುವ ಕುಂದಾಪುರದ ಹರೀಶ್‌ ಬಂಗೇರ ಪ್ರಕರಣದ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌, ರಿಯಾದ್‌ನ ಭಾರತೀಯ ರಾಯಭಾರಿ ಕಚೇರಿಯಿಂದ ಮಾಹಿತಿ ಪಡೆದಿದ್ದಾರೆ.

ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಹರೀಶ್‌ ಬಂಗೇರ ಅವರ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು,ಪ್ರಕರಣ ಇತ್ಯರ್ಥಕ್ಕೆ ಸ್ವಲ್ಪ ಕಾಲಾವಕಾಶ ಅಗತ್ಯವಿದ್ದು, ಬಂಧನದಲ್ಲಿರುವ ಹರೀಶ್‌ ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಹರೀಶ್‌ ಬಂಗೇರ ಪತ್ನಿ ಸುಮನಾ ಜತೆಗೂ ಮಣಿವಣ್ಣನ್‌ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸರ್ಕಾರ ನೆರವಿಗೆ ನಿಂತಿದ್ದು, ಹರೀಶ್‌ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಧೈರ್ಯ ತುಂಬಿದ್ದಾರೆ. ಅವರ ಸೂಚನೆ ಮೇರೆಗೆ ಮಂಗಳವಾರ ಗೋಪಾಡಿಯ ಹರೀಶ್‌ ಮನೆಗೆ ಭೇಟಿನೀಡಿ, ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು ಎಂದು ವಾರ್ತಾ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

ಪತಿಯ ಬಿಡುಗಡೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ನಿ ಮನವಿ ಮಾಡಿದ್ದಾರೆ. ಬಂಧನ ಪ್ರಕರಣವನ್ನು ಮಾನವ ಹಕ್ಕು ಆಯೋಗದ ಗಮನಕ್ಕೂ ತರಲಾಗಿದೆ ಎಂದು ಹರೀಶ್‌ ಮಾವ ಶ್ರೀನಿವಾಸ್‌ ಬಂಗೇರ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗುಪ್ತಚರ ವಿಭಾಗಕ್ಕೆ ಮಾಹಿತಿ: ಎಸ್‌ಪಿ

ಪ್ರಕರಣ ಸಂಬಂಧ ಪ್ರಜಾವಾಣಿಗೆ ಮಾಹಿತಿ ನೀಡಿದಎಸ್‌ಪಿ ನಿಶಾ ಜೇಮ್ಸ್‌ ‘ರಾಜ್ಯ ಗುಪ್ತಚರ ಇಲಾಖೆಗೆ ಪ್ರಕರಣದ ಮಾಹಿತಿ ನೀಡಲಾಗಿದೆ. ಪತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ ಎಂದು ಹರೀಶ್ ಬಂಗೇರಾ ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮಾಹಿತಿ ಕೋರಿ ಫೇಸ್‌ಬುಕ್ ಕಂಪೆನಿಗೆ ಪತ್ರ ಬರೆಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.