ADVERTISEMENT

ಪಡುಬಿದ್ರಿ | ಕೈಗಾರಿಕಾ ಘಟಕದ ಹಾರು ಬೂದಿ ರಸ್ತೆಗೆ: ಕಂಪನಿಗೆ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 2:43 IST
Last Updated 9 ಜನವರಿ 2026, 2:43 IST
ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕದ ಹಾರೂ ಬೂದಿಯನ್ನು ಸಾರ್ವಜನಿಕ ರಸ್ತೆಗೆ ಸುರಿದಿರುವುದು
ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕದ ಹಾರೂ ಬೂದಿಯನ್ನು ಸಾರ್ವಜನಿಕ ರಸ್ತೆಗೆ ಸುರಿದಿರುವುದು   

ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕದ ಹಾರು ಬೂದಿಯನ್ನು ಸಾರ್ವಜನಿಕ ರಸ್ತೆಗೆ ಸುರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಕಂಪ‌ನಿಗೆ ಎಚ್ಚರಿಕೆ ನೀಡಿದ್ದಾರೆ.

ನಂದಿಕೂರಿನಲ್ಲಿ ಕಾರ್ಯಾಚರಿಸುವ ಬಯೊಡೀಸೆಲ್‌, ಪಾಮ್ ಆಯಿಲ್ ಮತ್ತು ಗ್ಲಿಸೆರಿನ್ ಉತ್ಪಾದನಾ ಘಟಕದ ಹಾರುಬೂದಿಯನ್ನು ಕೆಲದಿನಗಳಿಂದ ಪಲಿಮಾರು– ಮಟ್ಟು ಸಂಪರ್ಕ ರಸ್ತೆಯ ಪ್ರದೇಶದಲ್ಲಿ ಸುರಿಯಲಾಗಿತ್ತು. ಇದರಿಂದ ಬೇಸರಗೊಂಡ ಗ್ರಾಮಸ್ಥರು ಬುಧವಾರ ಬೂದಿ ಸುರಿಯುತ್ತಿದ್ದ ಲಾರಿಯ ದಾಖಲೆ ಸಹಿತ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಲಾರಿ ಚಾಲಕ ಹಾಗೂ ಕಂಪನಿಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಕಂಪನಿಯವರು ಹಾರು ಬೂದಿ ಸಾಗಾಣಿಕೆಗೆ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ವಹಿಸಿರುವುದಾಗಿ ವಿವರಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಬೂದಿ ಸುರಿಯದಂತೆ ಹಾಗೂ ಸುರಿದಿರುವ ಬೂದಿಯನ್ನು ತೆರವು ಮಾಡುವಂತೆ ಎಚ್ಚರಿಕೆ ನೀಡಿರುವುದಾಗಿ ಪಡುಬಿದ್ರಿ ಠಾಣಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಮುಂದುವರಿದ ದುರ್ವಾಸನೆ:

ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಸ್ಥಳೀಯರು ಕಂಪನಿಗೆ ದೂರಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪರಿಸರ ಇಲಾಖೆಯಿಂದ ನೋಟಿಸ್ ನೀಡಿದರೂ ಕಂಪನಿ ಸ್ಪಂದಿಸಿಲ್ಲ. ಮುಂಜಾನೆ ಹಾಗೂ ಸಂಜೆ ವೇಳೆ ಘಟಕದ ಸುತ್ತಮುತ್ತಲಿನ ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿ ದುರ್ವಾಸನೆ ಇದೆ. ಈ ಬಗ್ಗೆ ಪರಿಸರ ಇಲಾಖೆ ಸಹಿತ ಜಿಲ್ಲಾಡಳಿತದ ಗಮನಕ್ಕೆ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.