
ಪಂಚಗಂಗಾವಳಿ ನದಿ
ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ನಗರದ ಸನಿಹದಲ್ಲೇ ವಿಶಾಲವಾಗಿ ಹರಡಿರುವ ಪಂಚಗಂಗಾವಳಿ ನದಿ ಮತ್ತು ಅದರ ಹಿನ್ನೀರು ಪ್ರದೇಶಗಳು ಜೀವ ವೈವಿಧ್ಯಗಳ ತಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಐದು ನದಿಗಳ ಸಂಗಮ ಸ್ಥಳವಾದ ಪಂಚಗಂಗಾವಳಿಯ ವಿಶಾಲವಾದ ಹಿನ್ನೀರು ಪ್ರದೇಶವು ಕಾಂಡ್ಲಾ ಕಾಡುಗಳಿಂದ ಆವೃತವಾಗಿ, ತನ್ನೊಳಗೆ ಹಸಿರು ಪ್ರಪಂಚವನ್ನೇ ಅಡಗಿಸಿಕೊಂಡಿದೆ.
ಇಲ್ಲಿನ ಕಾಂಡ್ಲಾ ಕಾಡಿನ ನಡುವೆ ಬೋಟ್ ಪ್ರಯಾಣ ಮಾಡುವುದು ಅವಿಸ್ಮರಣೀಯ ಅನುಭೂತಿ ನೀಡುತ್ತದೆ. ರಾಜ್ಯದ ವಿವಿಧೆಡೆಯ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುತ್ತಾರೆ.
ಸೌಪರ್ಣಿಕಾ, ವಾರಾಹಿ, ಕೇದಕ, ಚಕ್ರ ಮತ್ತು ಕುಬ್ಜಾ ನದಿಗಳು ಸೇರಿ ಪಂಚಗಂಗಾವಳಿ ರೂಪುಗೊಂಡು ಸಮುದ್ರ ಸೇರುತ್ತದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಕೂಡ ಇದೇ ನದಿಯ ದಡದಲ್ಲಿದೆ.
ಪಂಚಗಂಗಾವಳಿಯಲ್ಲಿ ಮೀನುಗಾರರ ಬದುಕು
ಪಂಚಗಂಗಾವಳಿಯಲ್ಲಿರುವ ಕುದ್ರುಗಳು (ಸಣ್ಣ ದ್ವೀಪಗಳು) ಮತ್ತು ಕಾಂಡ್ಲಾ ವನಗಳು ಸಾವಿರಾರು ಪಕ್ಷಿಗಳ ಆಶ್ರಯ ತಾಣವಾಗಿದೆ, ಪ್ರತಿ ವರ್ಷ ಅಕ್ಟೋಬರ್ ತಿಂಗಳಿಂದ ಮಾರ್ಚ್ ವರೆಗೆ ವಲಸೆ ಹಕ್ಕಿಗಳೂ ಇಲ್ಲಿಗೆ ಬರುತ್ತವೆ.
ಇಳಿತದ ಸಂದರ್ಭದಲ್ಲಿ ಪಂಚಗಂಗಾವಳಿ ನದಿಯಲ್ಲಿ ತಲೆ ಎತ್ತುವ ಮರಳಿನ ದಿಬ್ಬಗಳಿಗೆ ಸಾವಿರಾರು ಕಡಲ ಹಕ್ಕಿಗಳು ಮುತ್ತಿಕೊಳ್ಳುತ್ತವೆ. ಅದನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯ ಪಕ್ಷಿ ವೀಕ್ಷಕರು, ಛಾಯಾಗ್ರಾಹಕರು ಬರುತ್ತಾರೆ. ಸ್ಥಳೀಯ ಮೀನುಗಾರರು ಅವರನ್ನು ಬೋಟ್‌ಗಳ ಮೂಲಕ ಆ ದಿಬ್ಬಗಳ ಬಳಿಗೆ ಕರೆದೊಯ್ಯುತ್ತಾರೆ.
ಕ್ಯಾಸ್ಪಿಯನ್ ಟರ್ನ್, ಯುರೇಷಿಯನ್ ಕರ್ಲೂ, ಸೀಗಲ್, ಗ್ರೇಟರ್ ಕ್ರೆಸ್ಟೆಡ್ ಟರ್ನ್, ಗಲ್ ಬಿಲ್‌ಡ್ ಟರ್ನ್ ಪಕ್ಷಿಗಳು ಈ ನದಿಯ ಮರಳು ದಿಬ್ಬದಲ್ಲಿ ಕಂಡು ಬರುತ್ತವೆ. ಸಮೀಪ ಪ್ರದೇಶಗಳಲ್ಲಿ ಬ್ಲ್ಯಾಕ್ ಹೆಡೆಡ್ ಐಬಿಸ್, ಸ್ಯಾಂಡ್ ಪೈಪರ್, ಗ್ರೀನ್‌ಶಾಂಕ್ ಹಕ್ಕಿಗಳೂ ಕಣ್ಣಿಗೆ ಬೀಳುತ್ತವೆ.
ಈ ನದಿಯಲ್ಲಿ ಮೀನುಗಾರರು ನೆಟ್ಟಿರುವ ಕಂಬಗಳ ಮೇಲೆ ಗ್ರೇಟರ್ ಕ್ರೆಸ್ಟೆಡ್ ಟರ್ನ್ ಹಕ್ಕಿಗಳು ವಿರಮಿಸುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.
ಪಂಚಗಂಗಾವಳಿ ನದಿಯ ಕಂಡ್ಲಾವನ
ಪಂಚಗಂಗಾವಳಿ ನದಿಯ ಅಸುಪಾಸಿನ 100 ಹೆಕ್ಟೇರ್ ಪ್ರದೇಶದಲ್ಲಿರುವ ಕಾಂಡ್ಲಾ ವನ ಪ್ರದೇಶವನ್ನು ಪಾರಂಪರಿಕ ಜೀವ ವೈವಿಧ್ಯ ತಾಣವೆಂದು ಘೋಷಿಸಬೇಕೆಂಬ ಬೇಡಿಕೆಯೂ ಪರಿಸರವಾದಿಗಳಿಂದ ಈ ಹಿಂದೆಯೇ ಕೇಳಿ ಬಂದಿದೆ.
ಸಮುದ್ರ ಕೊರೆತ ಮತ್ತು ನದಿಯ ಸವಕಳಿಯನ್ನು ತಡೆಯುವಲ್ಲಿ ಕಾಂಡ್ಲಾ ವನಗಳು ಪ್ರಮುಖ ಪಾತ್ರವಹಿಸುತ್ತಿವೆ. ರೈಜೋಫೊರಾ ಮ್ಯುಕ್ರೋನೇಟಾ, ಅವಿಸೇನಿಯಾ ಅಫಿಸಿನಾಲಿಸ್ ಸೇರಿದಂತೆ ವಿವಿಧ ಪ್ರಭೇದದ ಕಾಂಡ್ಲಾ ಮರಗಳನ್ನು ಪಂಚಗಂಗಾವಳಿ ತೀರ ಪ್ರದೇಶದಲ್ಲಿ ಕಾಣಬಹುದಾಗಿದೆ.
ಈ ಕಾಂಡ್ಲಾ ವನದೊಳಗೆ ಬೋಟ್‌ನಲ್ಲಿ ಪ್ರಯಾಣಿಸಿದರೆ ಕಾಂಡ್ಲಾ ಮರಗಳ ಬೇರಿನಿಂದ ಮೂಡಿರುವ ಪ್ರಕೃತಿದತ್ತವಾದ ಚಿತ್ತಾರದ ಸೌಂದರ್ಯವನ್ನು ಸವಿಯಬಹುದಾಗಿದೆ. ಜೊತೆಗೆ ಈ ಮರಗಳಲ್ಲಿ ಆಶ್ರಯ ಪಡೆದಿರುವ ಪಕ್ಷಿ ಸಂಕುಲವನ್ನೂ ಕಣ್ತುಂಬಿಕೊಳ್ಳಬಹುದಾಗಿದೆ.
ಕಾಂಡ್ಲಾ ವನವು ಸಿಗಡಿ, ಏಡಿ ಹಾಗೂ ಹಲವು ಬಗೆಯ ಮೀನುಗಳ ಆವಾಸ ಸ್ಥಾನವೂ ಹೌದು. ಕಾಂಡ್ಲಾ ವನದೊಳಗೆ ದೋಣಿ ಪ್ರಯಾಣ ಮಾಡುವವರಿಗೆ ಕೆಲವೊಮ್ಮೆ ನೀರು ನಾಯಿಗಳನ್ನು ನೋಡುವ ಭಾಗ್ಯವೂ ಸಿಗುತ್ತದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ, ಮೀನುಗಾರಿಕೆ ಚಟುವಟಿಗಳೂ ಈ ನದಿಯಲ್ಲಿ ನಡೆಯುತ್ತವೆ. ಈ ನದಿಯಿಂದ ಚಿಪ್ಪುಗಳನ್ನು ಸಂಗ್ರಹಿಸುವ ಕಾಯಕದಲ್ಲೂ ಸಮೀಪದ ಮೀನುಗಾರರು ತೊಡಗಿಸಿಕೊಂಡಿದ್ದಾರೆ.
ಪಂಚಗಂಗಾವಳಿ ನದಿಯಲ್ಲಿ ದೋಣಿ ವಿಹಾರ ನಡೆಸಿ ಸೂರ್ಯೋದಯ, ಸೂರ್ಯಾಸ್ತದ ಸೊಬಗನ್ನೂ ಸವಿಯಬಹುದಾಗಿದೆ. ಸಮೀಪದ ಗಂಗೊಳ್ಳಿಯ ಸೀ ವಾಕ್‌ಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಅರಬ್ಬಿ ಸಮುದ್ರ ಮತ್ತು ಪಂಚಗಂಗಾವಳಿ ನದಿಗಳ ಸಂಗಮವನ್ನು ಅಲ್ಲಿಂದ ಕಂಡು ಆನಂದಿಸುತ್ತಾರೆ. ಪಂಚಗಂಗಾವಳಿಯಲ್ಲಿರುವ ಉಪ್ಪಿನ ಕುದ್ರು, ಬಬ್ಬು ಕುದ್ರುಗಳು ರಮಣೀಯ ಪರಿಸರವನ್ನು ಹೊಂದಿದ್ದು ಅಲ್ಲಿಗೂ ಪ್ರವಾಸಿಗರು ಭೇಟಿ ನೀಡುತ್ತಾರೆ.
ಪಂಚಗಂಗಾವಳಿ ನದಿಯ ಕಂಡ್ಲಾವನದ ಸೊಬಗು
‘ಪಂಚಗಂಗಾವಳಿ ನದಿಯ ಕುದ್ರು ಪ್ರದೇಶಗಳಿಗೆ ವಲಸೆ ಹಕ್ಕಿಗಳೂ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಕ್ಯಾಸ್ಪಿಯನ್ ಟರ್ನ್, ಟೆರೆಕ್ ಸ್ಯಾಂಡ್‌ಪೈಪರ್, ಬ್ಲ್ಯಾಕ್ ಹೆಡೆಡ್ ಗಲ್, ಬ್ರೌನ್ ಹೆಡೆಡ್ ಗಲ್ ಕಾಣಸಿಗುತ್ತವೆ. ಈ ನದಿಯ ಒಡಲಲ್ಲಿ ಅಪಾರ ಜಲಚರಗಳಿರುವುದರಿಂದ ಹಕ್ಕಿಗಳನ್ನು ಆಕರ್ಷಿಸುತ್ತದೆ’ ಎನ್ನುತ್ತಾರೆ ಪಕ್ಷಿತಜ್ಞ ಪ್ರೊ. ವಿ. ಲಕ್ಷ್ಮಿ ನಾರಾಯಣ ಉಪಾಧ್ಯ.
‘ಪಂಚಗಂಗಾವಳಿ ನದಿಯ ಬಬ್ಬುಕುದ್ರು ಪ್ರದೇಶದಲ್ಲಿ ಕ್ರ್ಯಾಬ್ ಪ್ಲೋವರ್ ಪಕ್ಷಿಯನ್ನೂ ನಾವು ಕೆಲವು ವರ್ಷಗಳ ಹಿಂದೆ ಗುರುತಿಸಿದ್ದೆವು’ ಎನ್ನುತ್ತಾರೆ ಅವರು.
ಕಾಂಡ್ಲಾ ಮರಗಳ ಬೇರಿನಲ್ಲಿ ಮೂಡಿದ ನೈಸರ್ಗಿಕ ಚಿತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.