ADVERTISEMENT

ಉಡುಪಿ: ಬಾಲಕರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 15:19 IST
Last Updated 31 ಮಾರ್ಚ್ 2022, 15:19 IST

ಉಡುಪಿ: ಬಾಲಕರಿಗೆ ಲೈಂಗಿಕ ದೌರ್ಜನ್ಯ ನೀಡಿದ 2 ಪ್ರಕರಣಗಳಲ್ಲಿ ಆರೋಪಿ ಚಂದ್ರ ಕೆ.ಹೆಮ್ಮಾಡಿಗೆ ಉಡುಪಿ ಪೋಕ್ಸೊ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಗುರುವಾರ ಆದೇಶ ನೀಡಿದೆ.

ಮೊದಲ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ ಬೈಕ್ ಸವಾರಿ ಮಾಡಿಸುವ ಆಮಿಷವೊಡಿದ ಆರೋಪಿ ಶೌಚಾಲಯದೊಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣದಲ್ಲಿ 23 ಸಾಕ್ಷಿಗಳಲ್ಲಿ 15 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.

ನೊಂದ ಬಾಲಕನ ಸಾಕ್ಷ್ಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಅಪರಾಧಿ ಎಂದು ತೀರ್ಮಾನಿಸಿದ ನ್ಯಾಯಾಲಯ‌ವು 10 ವರ್ಷ ಕಠಿಣ ಸಜೆ ನೀಡಿದೆ. ಸಂತ್ರಸ್ತ ಬಾಲಕನಿಗೆ ₹ 25 ಸಾವಿರ ನೀಡುವಂತೆ ಆದೇಶಿಸಿದೆ.

ADVERTISEMENT

ಮತ್ತೊಂದು‌ ಪ್ರಕರಣದಲ್ಲಿ 13 ವರ್ಷದ ಬಾಲಕನನ್ನು ಫೋಟೊ ತೆಗೆಯುವ ನೆಪದಲ್ಲಿ ಗುಹೆಯೊಳಗೆ ಕರೆದೊಯ್ದ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ. ಈ ಪ್ರಕರಣದಲ್ಲಿ 22 ಸಾಕ್ಷಿದಾರರ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆದಿತ್ತು.

ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿದ್ದರಿಂದ 5 ವರ್ಷ ಕಠಿಣ ಸಜೆ ಹಾಗೂ ಸಂತ್ರಸ್ತ ಬಾಲಕನಿಗೆ 25 ಸಾವಿರ ನೀಡುವಂತೆ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ಆದೇಶ ನೀಡಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ತಿಳಿಸಿದರು.

ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ 21 ಪ್ರಕರಣ ದಾಖಲಾಗಿದ್ದು, ಅವುಗಳ ಪೈಕಿ ಮೂರು ಪ್ರಕರಣಗಳು ಮಾತ್ರ ವಿಚಾರಣೆ ನಡೆದಿವೆ. 18 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.