ADVERTISEMENT

ಕಟಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಕೊರತೆ: ಶಾಶ್ವತ ಪರಿಹಾರ ಮರೀಚಿಕೆ

ಪ್ರಕಾಶ ಸುವರ್ಣ ಕಟಪಾಡಿ
Published 21 ಫೆಬ್ರುವರಿ 2026, 8:36 IST
Last Updated 21 ಫೆಬ್ರುವರಿ 2026, 8:36 IST
ಏಣಗುಡ್ಡೆ ಗ್ರಾಮದ ಸರ್ಕಾರಿ ಬಾವಿ
ಏಣಗುಡ್ಡೆ ಗ್ರಾಮದ ಸರ್ಕಾರಿ ಬಾವಿ   

ಶಿರ್ವ: ಕಾಪು ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಕಟಪಾಡಿ ಪಂಚಾಯಿತಿ ವ್ಯಾಪ್ತಿಯ ಏಣಗುಡ್ಡೆ ಮತ್ತು ಮೂಡಬೆಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಜಲ ಸಂಪನ್ಮೂಲಗಳ ಕೊರತೆಯಿದೆ. ಈ ಭಾಗದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.

ಪ್ರತಿವರ್ಷ ಎರಡೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಪಂಚಾಯಿತಿ ಹರಸಾಹಸ ಪಡುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಜೆ.ಎನ್.ನಗರ ಕಾಲೊನಿ, ದುರ್ಗಾನಗರ ಕಾಲೊನಿ, ಸರ್ಕಾರಿ ಗುಡ್ಡೆ ಕಾಲೊನಿಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನರು ಸಂಕಷ್ಟು ಅನುಭವಿಸುತ್ತಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಈ ತನಕ ಸಾಧ್ಯವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಈ ಭಾಗದಲ್ಲಿ ಧಾರಾಕಾರವಾಗಿ ಮಳೆ ಬಂದರೆ ಮಾತ್ರ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.

ADVERTISEMENT

ಏಣಗುಡ್ಡೆ ಗ್ರಾಮದ ಜೆ.ಎನ್.ನಗರ ಕಾಲೊನಿಯಲ್ಲಿ 200ಕ್ಕೂ ಅಧಿಕ ಮನೆಗಳಿದ್ದರೂ ಇಲ್ಲಿ ನಾಲ್ಕೈದು ಹಳೆಯ ಸರ್ಕಾರಿ ಬಾವಿಗಳು ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಮಾತ್ರ ಟ್ಯಾಂಕ್‌ಗಳಂತೆ ನೀರು ತುಂಬುವ ಈ ಬಾವಿಗಳು ಬೇಸಿಗೆಯಲ್ಲಿ ಬರಿದಾಗುತ್ತವೆ.

ಈ ಬಾವಿಗಳಲ್ಲಿ ನೀರಿನ ಒಳಹರಿವಿಲ್ಲದೆ ಸಮಸ್ಯೆಯಾಗಿದೆ. ಈ ಕಾಲೊನಿಗಳಲ್ಲಿ 15 ವರ್ಷಗಳಷ್ಟು ಹಳೆಯ ಕೆಲವು ನೀರು ಬಾರದ, ತುಕ್ಕು ಹಿಡಿದ ಬೋರ್‌ವೆಲ್‌ಗಳು ಮಾತ್ರ ಉಳಿದುಕೊಂಡಿವೆ. ಕಟಪಾಡಿ ಗ್ರಾಮ ಪಂಚಾಯಿತಿ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದ್ದರೂ ಜಲಮೂಲವಿಲ್ಲದೆ ಕುಡಿಯುವ ನೀರನ್ನು ಕಾಲಕಾಲಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಜನರು ದೂರಿದ್ದಾರೆ.

ಈ ಭಾಗದಲ್ಲಿ ಸಮರ್ಪಕ ಜಲಮೂಲಗಳ ಕೊರತೆಯಿದೆ. ಹಳೆಯ ಕಾಲದ ಸಣ್ಣ ನೀರಾವರಿ ಯೋಜನೆಗಳ ಟ್ಯಾಂಕ್‌ಗಳು, ನಲ್ಲಿಗಳು ಮಾತ್ರ ಇದ್ದು, ಸರ್ವ ಋತುವಿನಲ್ಲಿ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಕುಡಿಯುವ ನೀರಿನ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದರೂ ಪಂಚಾಯಿತಿ ಅಥವಾ ಯಾವುದೇ ಇಲಾಖೆಗಳಿಂದ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಪ್ರತಿವರ್ಷ ಬೇಸಿಗೆಯಲ್ಲಿ ಕಾಲೊನಿ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಲು ಮನಸ್ಸು ಮಾಡದಿರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಜೀವಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ಅಳವಡಿಸಿರುವುದು

‘ಜಲಜೀವನ್ ಮಿಷನ್ ನೀರೂ ಇಲ್ಲ’

ಗ್ರಾಮೀಣ ಭಾಗದ ಬಹು ನಿರೀಕ್ಷಿತ ಜಲಜೀವನ್ ಕುಡಿಯುವ ನೀರಿನ ಯೋಜನೆ ಈ ಭಾಗದಲ್ಲಿ ಇನ್ನೂ ಅನುಷ್ಠಾನಗೊಂಡಿಲ್ಲ. ಜೆ.ಎನ್.ನಗರ ಕಾಲೊನಿಗೆ ಸಮೀಪದ ಕೋಟೆ ಗ್ರಾಮ ಪಂಚಾಯಿತಿಯಿಂದ ಜಲಜೀವನ್ ಯೋಜನೆಗೆ ಮುಂಗಡ ಹಣ ಪಾವತಿ ಮಾಡಿ ಮೀಟರ್ ಸಹಿತ ನೀರಿನ ನಲ್ಲಿ ಅಳವಡಿಸಿದ್ದರೂ ಎರಡು ವರ್ಷಗಳಿಂದ ನೀರು ಬಂದಿಲ್ಲ. ಹಲವು ಕಡೆ ಮನೆ ಮನೆಗಳಲ್ಲಿ ಅಳವಡಿಸಲಾದ ನಲ್ಲಿಗಳು ತುಕ್ಕು ಹಿಡಿದಿವೆ. ಜಲಜೀವನ್ ಸರಬರಾಜು ಯೋಜನೆಯಡಿ ನೀರು ಬಂದಲ್ಲಿ ಶಾಶ್ವತ ಪರಿಹಾರವಾಗಿ ನೀರಿನ ಸಮಸ್ಯೆ ಎದುರಾಗದು’ ಎಂದು ಗ್ರಾಮಸ್ಥರಾದ ಲಕ್ಷಣ ಕಟಪಾಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.