ADVERTISEMENT

ಪೌರ ಕಾರ್ಮಿಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಕಸ ಬೇರ್ಪಡಿಸುವ ವಿಚಾರದಲ್ಲಿ ಗಲಾಟೆ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಪ್ರಮೋದ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 16:02 IST
Last Updated 12 ಮಾರ್ಚ್ 2021, 16:02 IST

ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣದ ಬಳಿಯ ಅಂಜುಮಾನ್ ಮಸೀದಿಯ ಎದುರಿಗಿರುವ ಖಾಸಗಿ ವಾಣಿಜ್ಯ ಮಳಿಗೆಗಳಿಂದ ಶುಕ್ರವಾರ ಕಸ ಸಂಗ್ರಹಿಸಲು ಬಂದ ಪೌರ ಕಾರ್ಮಿಕನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸಂಜು ಮಾದರ್ ನಗರ ಠಾಣೆಗೆ ನೀಡಿದ ದೂರಿನ ಮೇಲೆ ಆಸ್ಮಾ ಎಲೆಕ್ಟ್ರಾನಿಕ್ಸ್‌ನ ಇಸ್ಮಾಯಿಲ್ ಹಾಗೂ ಸೋಹೆಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಕಾರಣ:ಎಂದಿನಂತೆ ನಗರದ ಸಿಟಿ ಬಸ್‌ ನಿಲ್ದಾಣದ ಸುತ್ತಮುತ್ತ ಕಸ ಸಂಗ್ರಹಣೆಗೆ ಬಂದಿದ್ದ ಸಿಬ್ಬಂದಿ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಕೊಡುವಂತೆ ಅಂಗಡಿ ಮಾಲೀಕರಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಸ್ಮಾಯಿಲ್‌ ಹಾಗೂ ಸೋಹೆಲ್‌ ಕಸ ಬೇರ್ಪಡಿಸಿಕೊಳ್ಳುವಂತೆ ಪೌರ ಕಾರ್ಮಿಕರಿಗೆ ದಬಾಯಿಸಿದ್ದಾರೆ. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಜು ಮಾದರ್ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳ ವಿರುದ್ಧ ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಹಾಗೂ ದೌರ್ಜನ್ಯ ತಡೆ ಕಾಯ್ದೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಉಡುಪಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಮೋದ್ ಖಂಡನೆ:ಪೌರಕಾರ್ಮಿಕರ ಮೇಲಿನ ಹಲ್ಲೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಖಂಡಿಸಿದ್ದಾರೆ. ನಗರದ ಸ್ವಚ್ಚತೆಯನ್ನು ಕಾಪಾಡುವ ಹೊಣೆಹೊತ್ತಿರುವ ಪೌರಕಾರ್ಮಿಕರ ಶ್ರಮವನ್ನು ಗೌರವಿಸಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್‌ಪಿ ವಿಷ್ಣುವರ್ಧನ್ ಅವರಿಗೆ ತಿಳಿಸಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.