
ಉಡುಪಿ: ರಂಗಭೂಮಿಯ ಕಾವುಗೂಡಾಗಿ ಎರಡು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಆರಂಭಗೊಂಡ ನಿರ್ದಿಗಂತವು ಹೊಸತೊಂದು ಬಾಂಧವ್ಯ ಅರಸಿಕೊಂಡು ಕರಾವಳಿಗೆ ಬಂದಿದ್ದು, ಕರಾವಳಿಯ ನಿರ್ದಿಗಂತದ ಉದ್ಘಾಟನೆಯು ಜ. 18ರಂದು ಸಂಜೆ 6 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಿತ್ರನಟ ಪ್ರಕಾಶ್‌ರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಾಹಿತಿ ಫಕೀರ್ ಮಹಮದ್ ಕಟಪಾಡಿ ಅವರು ಕರಾವಳಿಯ ನಿರ್ದಿಗಂತವನ್ನು ಉದ್ಘಾಟಿಸುವರು ಎಂದು ಹೇಳಿದರು.
ಅಂದು ಬೆಳಿಗ್ಗೆ 10.30ರಿಂದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಬಿಂದು ರಕ್ಷಿದಿ ನಿರ್ದೇಶನದಲ್ಲಿ ‘ಮೃಗ ಮತ್ತು ಸುಂದರಿ’ ನಾಟಕ ಮತ್ತು ಮಧ್ಯಾಹ್ನ 12.30ರಿಂದ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಕ್ಕಳಿಂದ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ‘ಕ್ಯೂರಿಯಸ್’ ವಿಜ್ಞಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಮಧ್ಯಾಹ್ನ 2.30ರಿಂದ ಶೈಕ್ಷಣಿಕ ಕಮ್ಮಟ ನಡೆಯಲಿದ್ದು, ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್, ಕೆ.ಕಿಶೋರ ಕುಮಾರ್ ಶೆಟ್ಟಿ, ನಾಗೇಂದ್ರ ಪೈ, ವರದರಾಜ್ ಭಿರ್ತಿ, ಸುಧಾಕರ್ ಪಿ. ಬೈಂದೂರು, ಅರುಣಲಾಲ್ ಅವರು ಅನುಭವಗಳನ್ನು ಹಂಚಿಕೊಳ್ಳುವರು ಎಂದರು.
19ರಂದು ಸಂಜೆ 6.30ಕ್ಕೆ ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ‘ದೇವರ ಆತ್ಮಹತ್ಯೆ’ ನಾಟಕ. 20ರಂದು ಸಂಜೆ 6.30ಕ್ಕೆ ‘ರಾಮ, ಕೃಷ್ಣ, ಶಿವ’ ಹಾಗೂ 21ರಂದು ಸಂಜೆ 6ರಿಂದ ಪ್ರಕಾಶ್ ರಾಜ್ ಮತ್ತು ನಿರ್ದಿಗಂತ ತಂಡದಿಂದ ‘ಸಮತೆಯ ಹಾಡು’ ಮತ್ತು ಸಂಜೆ 7.15ರಿಂದ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅನುಷ್ ಶೆಟ್ಟಿ, ಗಣೇಶ್ ಮಂದಾರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.