ADVERTISEMENT

ಸೋಮೇಶ್ವರ ಬೀಚ್‌ ಸ್ವಚ್ಛಗೊಳಿಸಿದ ನವ ದಂಪತಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ

ಅನುದೀಪ್‌, ಮಿನುಷಾ ಪರಿಸರ ಕಾಳಜಿಯನ್ನು ಮನ್‌ಕಿ ಬಾತ್‌ನಲ್ಲಿ ಮೆಚ್ಚಿಕೊಂಡ ಮೋದಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 12:58 IST
Last Updated 27 ಡಿಸೆಂಬರ್ 2020, 12:58 IST
ಅನುದೀಪ್ ಹಾಗೂ ಮಿನುಷಾ ಕಾಂಚನ್‌ ದಂಪತಿ
ಅನುದೀಪ್ ಹಾಗೂ ಮಿನುಷಾ ಕಾಂಚನ್‌ ದಂಪತಿ   

ಉಡುಪಿ: ಕಡಲತೀರ ಸ್ವಚ್ಛಗೊಳಿಸಿ ಮಧುಚಂದ್ರಕ್ಕೆ ಹೋಗುವ ಸಂಕಲ್ಪ ಮಾಡಿದ್ದ ಬೈಂದೂರಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿಯ ಪರಿಸರ ಪ್ರೇಮವನ್ನು ಪ್ರಧಾನಿ ನರೇಂದ್ರ ಮೋದಿ ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.

‘ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಅನುದೀಪ್ ಹಾಗೂ ಮಿನುಷಾ ದಂಪತಿ ಇತರರಂತೆ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಸೋಮೇಶ್ವರ ಬೀಚ್‌ನಲ್ಲಿ ಸಾರ್ವಜನಿರು ಬಿಸಾಡಿಹೋಗಿದ್ದ ತ್ಯಾಜ್ಯವನ್ನು ಹೆಕ್ಕುವ ಸಂಕಲ್ಪ ಮಾಡಿ ಯಶಸ್ವಿಯಾಗಿದ್ದಾರೆ. ಕಡಲತೀರ ಶುಚಿಗೊಳಿಸುವ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ.

ಎಲ್ಲರ ಸಂಘಟಿತ ಶ್ರಮದ ಫಲವಾಗಿ ಸೋಮೇಶ್ವರ ಬೀಚ್‌ನಲ್ಲಿದ್ದ 800 ಕೆ.ಜಿ ತ್ಯಾಜ್ಯ ವಿಲೇವಾರಿಯಾಗಿದೆ. ಕಡಲ ತೀರಗಳು ಹಾಗೂ ಪರ್ವತ ಶ್ರೇಣಿಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿ ಸೃಷ್ಟಿಯಾಗಲು ಕಾರಣ ಯಾರು ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಅನುದೀಪ್ ಹಾಗೂ ಮಿನುಷಾ ದಂಪತಿಯಂತೆ ಎಲ್ಲರೂ ಪರಿಸರವನ್ನು ಸ್ವಚ್ಛಗೊಳಿಸುವ ಸಂಕಲ್ಪ ಮಾಡೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಅನುದೀಪ್ ಹೆಗಡೆ ಹಾಗೂ ಮಿನುಷಾ ದಂಪತಿಯ ಪರಿಸರ ಕಾಳಜಿಯ ಕುರಿತು ಡಿ.7ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಡಿಜಿಟಲ್‌ ಮಾರ್ಕೆಂಟಿಂಗ್ ವೃತ್ತಿಯಲ್ಲಿರುವ ಅನುದೀಪ್‌ ಹಾಗೂ ಫಾರ್ಮಾಸಿಟಿಕಲ್‌ ಕಂಪನಿ ಉದ್ಯೋಗಿ ಮಿನುಷಾ ನ.18ರಂದು ಹಸೆಮಣೆ ಏರಿದ್ದರು. ಮದುವೆಯ ನೆನಪು ಬಹುಕಾಲ ಉಳಿಯಬೇಕು ಎಂಬ ಉದ್ದೇಶದಿಂದ ಮಧುಚಂದ್ರಕ್ಕೆ ಹೋಗುವ ಬದಲು ಸೋಮೇಶ್ವರ ಬೀಚ್‌ ಸ್ವಚ್ಛಗೊಳಿಸುವ ಸಂಕಲ್ಪ ಮಾಡಿದ್ದರು.

ನ. 27ರಿಂದ ಡಿ.5ರವರೆಗೆಪತಿ ಪತ್ನಿ ಇಬ್ಬರೇಸೋಮೇಶ್ವರ ಬೀಚ್‌ನಲ್ಲಿ ಬಿದ್ದಿದ್ದತ್ಯಾಜ್ಯವನ್ನುಹೆಕ್ಕಲು ಆರಂಭಿಸಿದ್ದರು. ಸ್ಥಳೀಯರುಹಾಗೂ ಪ್ರವಾಸಿಗರುಇದರಿಂದಪ್ರೇರೇಪಿತರಾಗಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದರು. ಪ್ರತಿಫಲವಾಗಿ 700 ಮೀಟರ್‌ನಷ್ಟು ಕಡಲತೀರ ಸ್ವಚ್ಛವಾಗಿ 800 ಕೆ.ಜಿ ಕಸ ವಿಲೇವಾರಿಯಾಗಿತ್ತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.