ADVERTISEMENT

ಉಡುಪಿ: ಸರಣಿ ಸುಲಿಗೆಕೋರನ ಬಂಧನ

ಮಣಿಪಾಲದಲ್ಲಿ ಸುಲಿಗೆಗೆ ಹೊಂಚು ಹಾಕುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 13:14 IST
Last Updated 27 ಸೆಪ್ಟೆಂಬರ್ 2020, 13:14 IST
ವಿಷ್ಣುವರ್ಧನ್‌, ಎಸ್‌ಪಿ 
ವಿಷ್ಣುವರ್ಧನ್‌, ಎಸ್‌ಪಿ    

ಉಡುಪಿ: ಮಣಿಪಾಲ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಸರಣಿ ಸುಲಿಗೆ ಪ್ರಕರಣಗಳ ಪ್ರಮುಖ ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಕಾಪು ತಾಲ್ಲೂಕಿನ ಮಲ್ಲಾರು ಕೊಂಬಗಡ್ಡೆ ನಿವಾಸಿ ಮೊಹಮ್ಮದ್ ಆಶಿಕ್‌ (19) ಬಂಧಿತ ಆರೋಪಿ ಎಂದು ಎಸ್‌ಪಿ ವಿಷ್ಣುವರ್ಧನ್‌ ತಿಳಿಸಿದರು.

ಭಾನುವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ‘ಸೆ.19ರಂದು ಬೆಳಗಿನ ಜಾವ ಮಣಿಪಾಲ ಹಾಗೂ ಉಡುಪಿ ನಗರ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಸುಲಿಗೆಕೋರರು ಸಾರ್ವಜನಿಕರನ್ನು ಬೆದರಿಸಿ, ಚೂರಿ, ಸ್ಕ್ರೂಡ್ರೈವರ್‌ನಿಂದ ಹಲ್ಲೆ ಮಾಡಿ ಹಣ, ಮೊಬೈಲ್‌, ಪರ್ಸ್‌ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಮೂರು, ಉಡುಪಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದವು.

ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಈ ಪ್ರಕರಣಗಳನ್ನು ಬೇಧಿಸಲು ಉಡುಪಿ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಮಣಿಪಾಲ ಇನ್‌ಸ್ಪೆಕ್ಟರ್ ಮಂಜುನಾಥ್ ಎಂ. ಗೌಡ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಶನಿವಾರ ಮಣಿಪಾಲದಲ್ಲಿ ಮತ್ತೆ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದಾಗ ಆರೋಪಿ ಮೊಹಮ್ಮದ್ ಆಶಿಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ADVERTISEMENT

ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಬೈಕ್‌, ಸ್ಕ್ರೂಡ್ರೈವರ್, ಚೂರಿ ಹಾಗೂ ಸಾರ್ವಜನಿಕರಿಂದ ಸುಲಿಗೆ ಮಾಡಿದ್ದ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಆಶಿಕ್‌ ಬೆಂಗಳೂರಿನಿಂದ ಬೈಕ್‌ ಕಳವು ಮಾಡಿಕೊಂಡು ಬಂದಿರುವ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ ಎಂದರು.

ಕೊಲೆ ಯತ್ನ ಪ್ರಕರಣದಲ್ಲೂ ಭಾಗಿ:

ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಸೆ.22ರಂದು ಕಾಪು ತಾಲ್ಲೂಕು ಮಲ್ಲಾರು ಗ್ರಾಮದ ಗುಡ್ಡೆಕೇರಿಯಲ್ಲಿ ಅಬ್ದುಲ್‌ ಸತ್ತಾರ್ ಕೊಲೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿರುವುದು ತಿಳಿದುಬಂದಿದೆ. ಕೊಲೆ ಯತ್ನ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಕುಂದಾಪುರದ ನಾವುಂದದ ಮಿಸ್ಬಾ (22), ಇಜಾಜ್ ಅಹಮ್ಮದ್ (19), ಮಲ್ಪೆ ಜೋಕಟ್ಟೆಯ ಕಾಳಾವರ ಚರ್ಚ್‌ ಬಳಿಯ ದಾವೂದ್ ಇಬ್ರಾಹಿಂ (26)ನನ್ನು ಶನಿವಾರ ಕಾಪು ಪೊಲೀಸರು ಉದ್ಯಾವರದ ಜೈಹಿಂದ್ ಜಂಕ್ಷನ್‌ ಬಳಿ ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಬಂಧಿತ ನಾಲ್ವರು ಆರೋಪಿಗಳಿಂದ ಎರಡು ಕಾರು, ಚೂರಿ, ಕತ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.