ADVERTISEMENT

ಉಡುಪಿ: ಸಂಜೀವಿನಿ ಬ್ರಾಂಡ್ ಉತ್ಪನ್ನಗಳು ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:18 IST
Last Updated 15 ಮೇ 2025, 12:18 IST
ಸಂಜೀವಿನಿ ಮಹಿಳೆಯರು ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ
ಸಂಜೀವಿನಿ ಮಹಿಳೆಯರು ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ   

ಉಡುಪಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಸಂಜೀವಿನಿ ಸ್ವ–ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ ಆಯ್ದ 25ರಿಂದ 30 ಉತ್ಪನ್ನಗಳನ್ನು ಉಡುಪಿ ಸಂಜೀವಿನಿ ಹೆಸರಿನೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಅಮಾಸೆಬೈಲ್‌ನ ಸಂಜೀವಿನಿ ಮಹಿಳೆಯರು ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ ಹಾಗೂ ಹಳ್ಳಿಹೊಳೆ ಸಂಜೀವಿನಿ ಸ್ವ–ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಕೃತಕ ಆಭರಣಗಳನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಒಂದೆ ಸೂರಿನಡಿ ಬ್ರ್ಯಾಂಡ್ ಮಾಡಿರುವ ಪ್ರಯತ್ನವು ರಾಜ್ಯದಲ್ಲೇ ಮೊದಲಾಗಿದೆ. ಮುಂದಿನ ದಿನಗಳಲ್ಲಿ ಸಂಜೀವಿನಿ ಸ್ವ–ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಉಡುಪಿ ಸಂಜೀವಿನಿ ಬ್ರ್ಯಾಂಡ್ ಅಡಿಯಲ್ಲಿ ತರಲಾಗುವುದು ಎಂದು ಜಿಲ್ಲಾ ಪಂಚಾಯಿತಿಯ ಮೂಲಗಳು ತಿಳಿಸಿವೆ.

ADVERTISEMENT

ಈಗಾಗಲೇ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಮಾರಾಟ ಮಳಿಗೆಗಳನ್ನು ಗುರುತಿಸಲಾಗಿದ್ದು, ಈ ಮಾರಾಟ ಮಳಿಗೆ, ಸೂಪರ್ ಮಾರ್ಕೆಟ್, ಮಾಲ್ ಹಾಗೂ ಆನ್‌ಲೈನ್‌ ಮೂಲಕವೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದಿದೆ.

ಜಿಲ್ಲೆಯಲ್ಲಿ ಸುಮಾರು 8,196 ಗುಂಪುಗಳಿದ್ದು, 89,365 ಮಹಿಳೆಯರು ಇದರಲ್ಲಿ ಸದಸ್ಯರಾಗಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವವರನ್ನು, ವಿಶೇಷ ಚೇತನರನ್ನು ಹಾಗೂ ಅವಕಾಶ ವಂಚಿತ ಮಹಿಳೆಯರನ್ನು ಈ ಸ್ವ–ಸಹಾಯ ಗುಂಪುಗಳಿಗೆ ಸೇರ್ಪಡೆಗೊಳಿಸುವುದರ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಲಾಗಿದೆ ಎಂದು ಹೇಳಿದೆ.

ಸಂಜೀವಿನಿ ಸ್ವ–ಸಹಾಯ ಗುಂಪಿನ ಮಹಿಳೆಯರು ಉಳಿತಾಯ, ಸಾಲ ಮಾತ್ರವಲ್ಲದೆ ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಸಾಲ, ಸರ್ಕಾರಿ ಇಲಾಖೆಯ ಮುಖಾಂತರ ಸಾಲ ಸೌಲಭ್ಯ ಪಡೆದು ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ಮೂಲಕ ಮಾಡಿಕೊಡಲಾಗುತ್ತಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.