
ಉಡುಪಿ: ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಾಮಾಜಿಕ ಅಂಧಕಾರವನ್ನು ಹೋಗಲಾಡಿಸಿ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ್ದ ಸರ್ವಜ್ಞ ಇಂದಿನ ಪೀಳಿಗೆಗೆ ಸನ್ಮಾರ್ಗ ತೋರಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಹಿರಿಯಡ್ಕದ ಡಾ.ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
16ನೇ ಶತಮಾನದ ಕನ್ನಡ ತ್ರಿಪದಿ ಕವಿಯಾದ ಸರ್ವಜ್ಞ, ಸಾಮಾಜಿಕ ಸಮಾನತೆ, ನೀತಿ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಬೋಧಿಸಿದ್ದಾರೆ. ಸರ್ವಜ್ಞ ತ್ರಿಪದಿಗಳು ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಜನ ಸಾಮಾನ್ಯರಲ್ಲಿ ನೀತಿ ಪಾಠಗಳನ್ನು ಬಿತ್ತಲು ಇಂದಿಗೂ ಪ್ರಸ್ತುತವಾಗಿವೆ. ಅವರು ಜೀವನ ಅನುಭವದ ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇದ್ದಂತಹ ಅಂಕು ಡೊಂಕುಗಳನ್ನು ತಿದ್ದುವ ಕುರಿತು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅವರ ತ್ರಿಪದಿಗಳು ಮೂಡಿಬಂದಿವೆ ಎಂದರು.
ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞರು ವಚನಗಳನ್ನು ಬರೆಯದ ಕ್ಷೇತ್ರಗಳಿಲ್ಲ. ಸರ್ವಜ್ಞರ ತ್ರಿಪದಿಗಳಲ್ಲಿನ ಸಾರಗಳಿಂದ ಪರಿಣಾಮಕಾರಿ ವ್ಯಕ್ತಿತ್ವ ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಸರ್ವಜ್ಞರ ಆದರ್ಶ, ತತ್ವ, ವಿಚಾರಧಾರೆಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಸತ್ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಲಾಲ್, ಕುಲಾಲ ಸಂಘ ಪೆರ್ಡೂರು ಅಧ್ಯಕ್ಷ ಕಾಳು ಕುಲಾಲ, ಪ್ರಾಂಶುಪಾಲೆ ವೀಣಾ, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಜಿಲ್ಲಾ ಕುಲಾಲ ಸಂಘ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.