ADVERTISEMENT

ಬ್ರಹ್ಮಾವರ | ಬಿರ್ತಿ: ಅಕ್ಷರದವ್ವನ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:46 IST
Last Updated 6 ಜನವರಿ 2026, 6:46 IST
ಬ್ರಹ್ಮಾವರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಅಕ್ಷರದವ್ವನ ಅರಿವು ಕಾರ್ಯಕ್ರಮ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಬ್ರಹ್ಮಾವರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಅಕ್ಷರದವ್ವನ ಅರಿವು ಕಾರ್ಯಕ್ರಮ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.   

ಬ್ರಹ್ಮಾವರ: ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ, ಮಹಿಳೆಯರಿಗೆ ಶಿಕ್ಷಣ ನಿಷಿದ್ಧವಿದ್ದ ಮತ್ತು ಮನುಸ್ಮೃತಿ ಆಚರಣೆಯಲ್ಲಿದ್ದ ಕಾಲದಲ್ಲಿ ದಲಿತರು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿ ಬಾಯಿ ಫುಲೆ ಹೆಸರಲ್ಲಿ ಸರ್ಕಾರ ಶಿಕ್ಷಕರ ದಿನಾಚರಣೆ ಘೋಷಿಸಲಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಮಿತಿಯ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದರು.

ಇಲ್ಲಿನ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಯುವಕ ಮಂಡಲ, ಆದಿದ್ರಾವಿಡ ಸಹಕಾರ ಸಂಘ, ಸಾವಿತ್ರಿ ಬಾಯಿ ಫುಲೆ ಗ್ರಂಥಾಲಯದ ಆಶ್ರಯದಲ್ಲಿ ನಡೆದ ಅಕ್ಷರದವ್ವನ ಅರಿವು ಕಾರ್ಯಕ್ರಮ, ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 

ದಲಿತರು ಮತ್ತು ಮಹಿಳೆಯರಿಗಾಗಿ ಶಾಲೆ ತೆರೆದ ಸಾವಿತ್ರಿ ಬಾಯಿ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ. ಬ್ರಿಟಿಷರೇ ಸಾವಿತ್ರಿ ಬಾಯಿ ಫುಲೆ ಅವರನ್ನು ‘ಫಸ್ಟ್ ಲೇಡಿ ಟೀಚರ್ ಆಫ್ ಇಂಡಿಯಾ’ ಎಂದು ಘೋಷಿಸಿದ್ದರು. ಅವರು ಅವಮಾನಗಳನ್ನು ಅನುಭವಿಸಿಯೂ ದೇಶದ ಶೋಷಿತರಿಗೆ ಶಿಕ್ಷಣದ ಬೆಳಕನ್ನು ತೋರಿದ ಮಹಾಮಾತೆ ಎಂದು ಹೇಳಿದರು.

ADVERTISEMENT

ಸಮಿತಿಯ ಶ್ಯಾಮರಾಜ ಬಿರ್ತಿ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಶಾಲೆಗೆ ಪಾಠ ಮಾಡಲು ಹೋಗುವಾಗ ಮೇಲ್ವರ್ಗದವರು ಸೆಗಣಿ, ಕಲ್ಲುಗಳನ್ನು ಎಸೆಯುತ್ತಿದ್ದರಂತೆ. ಅದಕ್ಕಾಗಿ ಅವರು ಎರಡು ಸೀರೆ ತೆಗೆದುಕೊಂಡು ಹೋಗುತ್ತಿದ್ದರು. ಮಲಿನಗೊಂಡ ಸೀರೆಯನ್ನು ಶಾಲೆಯಲ್ಲಿ ಬದಲಾಯಿಸಿ ಬೇರೆ ಸೀರೆ ಉಟ್ಟು ಪಾಠ ಮಾಡುತ್ತಿದ್ದರು. ದಲಿತರಿಗೆ ಶಿಕ್ಷಣ ಕೊಡಬಾರದು ಎಂದು ಅವರಿಗೆ ಬೆದರಿಕೆ ಒಡ್ಡಲಾಯಿತು ಎಂದು ತಿಳಿಸಿದರು.

ಬೋಜರಾಜ್ ಕಾವ್ರಾಡಿ, ಆದಿದ್ರಾವಿಡ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಮಾಸ್ಟರ್, ಅಂಬೇಡ್ಕರ್ ಯುವಕ ಮಂಡಲದ ಕಾರ್ಯದರ್ಶಿ ಅನಿಲ ಬಿರ್ತಿ, ಮಂಜುನಾಥ ಬಾಳ್ಕದ್ರು, ಶ್ರೀನಿವಾಸ ವಡ್ಡರ್ಸೆ, ಹರೀಶ್ಚಂದ್ರ ಕೆ.ಡಿ, ಬಿರ್ತಿ ಸುರೇಶ, ಪ್ರಶಾಂತ ಬಿರ್ತಿ, ಶಿವಾನಂದ ಬಿರ್ತಿ, ಚೈತನ್ಯ ಬಿರ್ತಿ, ಕಿಶನ್ ಬಿರ್ತಿ, ಉಮೇಶ ಕಪಿಲೇಶ್ವರ, ಪ್ರಕಾಶ ಹೇರೂರು, ನಿಖಿಲ ಹಂದಾಡಿ, ಪ್ರದೀಪ ಕುಕ್ಕುಡೆ, ಸುಮನಾ ಟೀಚರ್, ಬಬಿತಾ ಟೀಚರ್, ಮಮತಾ, ಗಣೇಶ ಬಿರ್ತಿ, ಲಿಂಗಪ್ಪ ಮಾಸ್ಟರ್ ಭಾಗವಹಿಸಿದ್ದರು.