ADVERTISEMENT

ಕೋಡಿ: ಮತ್ತೆ ಮೊಟ್ಟೆಯೊಡೆದು ಹೊರಬಂದ ಕಡಲಾಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 9:03 IST
Last Updated 7 ಏಪ್ರಿಲ್ 2021, 9:03 IST
ಮೊಟ್ಟೆಯೊಡೆದು ಹೊರಬಂದ ಕಡಲಾಮೆ ಮರಿಗಳು
ಮೊಟ್ಟೆಯೊಡೆದು ಹೊರಬಂದ ಕಡಲಾಮೆ ಮರಿಗಳು   

ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿ ಸಮುದ್ರ ಕಿನಾರೆಯ ಲೈಟ್ಹೌಸ್ ಬಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಹ್ಯಾಚರಿಯಿಂದ ಸೋಮವಾರ ರಾತ್ರಿ 72 ಕಡಲಾಮೆ ಮರಿಗಳು ಹೊರಬಂದು ಅರಬ್ಬಿ ಕಡಲು ಸೇರಿದೆ.

ಕಳೆದ ಜ. 22 ರಿಂದ ಮಾ. 3 ರವರೆಗೆ ಕೋಡಿ ಕಡಲ ತೀರದಲ್ಲಿ ಪತ್ತೆಯಾಗಿದ್ದ ಕಡಲಾಮೆ ಮೊಟ್ಟೆಗಳನ್ನು ಸ್ಥಳೀಯ ಸೇವಾ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಮುದ್ರ ತೀರದಲ್ಲಿ 11 ಹ್ಯಾಚರಿಯನ್ನು ನಿರ್ಮಿಸಿ ಮೊಟ್ಟೆಗಳನ್ನು ರಕ್ಷಿಸಲು ಕ್ರಮ ಕೈಗೊಂಡಿತ್ತಲ್ಲದೆ, ಹಗಲು - ರಾತ್ರಿ ಎನ್ನದೆ ನಿರಂತರವಾಗಿ ಕಾವಲು ಕಾರ್ಯ ನಡೆಸಲಾಗುತ್ತಿತ್ತು.

ಈವರೆಗೆ ಒಟ್ಟು 7 ಹ್ಯಾಚರಿಗಳಿಂದ ಅಂದಾಜು 370 ಕ್ಕೂಅಧಿಕ ಮರಿಗಳು ಮೊಟ್ಟೆಯ ಕವಚದಿಂದ ಹೊರಬಂದು ಕಡಲು ಸೇರಿದೆ. ಸೋಮವಾರ ರಾತ್ರಿ ಕಡಲಾಮೆ ಮರಿಗಳನ್ನು ಕಡಲಿಗೆ ಸೇರಿಸುವ ಕಾರ್ಯಾಚರಣೆ ವೇಳೆ ರಾಜ್ಯ ಅರಣ್ಯ ಕಾರ್ಯ ಪಡೆ ಮುಖ್ಯಸ್ಥ , ಪಿಸಿಸಿಎಫ್ ಸಂಜಯಮೋಹನ್, ಅರಣ್ಯ ಉಪವಿಭಾಗದ ಡಿಎಫ್ಓ ಆಶೀಶ್ ರೆಡ್ಡಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ , ಹಸ್ತಾ ಶೆಟ್ಟಿ ಇದ್ದರು.

ADVERTISEMENT

ಮೊಟ್ಟೆ ಪತ್ತೆಯಾದ ದಿನದಿಂದ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿರುವ ಎಫ್.ಎಸ್.ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ಹಾಗೂಎಂಪ್ರಿ ಆರ್ ಝಡ್ ವರ್ಕರ್ಸ್ ಸಂಘಟನೆಯ ನಾಗರಾಜ್ ಶೆಟ್ಟಿ, ದಿನೇಶ್ ಸಾರಂಗ, ವೆಂಕಟೇಶ, ಲಕ್ಷ್ಮಣ ಪೂಜಾರಿ, ಸಚಿನ್ ಪೂಜಾರಿ, ರಾಘು ಬಂಗೇರಾ, ಭರತ್ ಖಾರ್ವಿ, ಸಂಪತ್, ಉದಯ್ ಖಾರ್ವಿ ಕಾರ್ಯಾಚರಣೆ ವೇಳೆ ಇದ್ದರು.

ಸಂರಕ್ಷಣಾ ಕೇಂದ್ರಕ್ಕೆ ಮನವಿ:

ಕುಂದಾಪುರದ ಅರಣ್ಯ ಪ್ರವಾಸಿ ಮಂದಿರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಾದ ಸಂಜಯಮೋಹನ್ ಅವರನ್ನು ಭೇಟಿಯಾದ ಕಡಲಾಮೆ ರಕ್ಷಣಾ ತಂಡದ ಸದಸ್ಯರು, ಕಡಲಾಮೆ ಸಂತತಿಯಲ್ಲಿ ಅಪರೂಪದ್ದಾಗಿರುವ ಹಾಗೂ ಅಳಿವಿನಂಚಿನಲ್ಲಿ ಇರುವ ಆಲಿವ್ ರೀಡ್ಲೆ ಪ್ರಬೇಧದ ಮೊಟ್ಟೆಗಳ ರಕ್ಷಣೆಗಾಗಿ ಕರಾವಳಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.