ADVERTISEMENT

ಉಡುಪಿ: ಸರ್ವಿಸ್‌ ರಸ್ತೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ

ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಜಂಕ್ಷನ್‌ ವರೆಗಿನ ರಸ್ತೆ ದುರವಸ್ಥೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:22 IST
Last Updated 6 ನವೆಂಬರ್ 2025, 6:22 IST
ಅಂಬಲಪಾಡಿಯ ಸರ್ವಿಸ್‌ ರಸ್ತೆ
ಅಂಬಲಪಾಡಿಯ ಸರ್ವಿಸ್‌ ರಸ್ತೆ   

ಉಡುಪಿ: ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಜಂಕ್ಷನ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್‌ ರಸ್ತೆಗಳನ್ನು ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಜನರಿಂದ ಕೇಳಿಬಂದಿದೆ.

ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಈ ಕಾರಣಕ್ಕೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸುತ್ತಿವೆ. ಇದರಿಂದಾಗಿ ಸರ್ವಿಸ್‌ ರಸ್ತೆಯು ಸಂಪೂರ್ಣ ಹದಗೆಟ್ಟಿದೆ.

ಸರ್ವಿಸ್‌ ರಸ್ತೆಯ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಹದಗೆಡುತ್ತಿದೆ. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಸರ್ವಿಸ್‌ ರಸ್ತೆಗಳ ವಿಸ್ತರಣೆ ಕಾರ್ಯವೂ ನಡೆಯಬೇಕು. ಇಲ್ಲದಿದ್ದರೆ ಮತ್ತೆ ಜನರಿಗೆ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ADVERTISEMENT

ಈ ಸರ್ವಿಸ್‌ ರಸ್ತೆ ತೀರಾ ಹದಗೆಟ್ಟು ತಿಂಗಳುಗಳು ಕಳೆದರೂ ಸಂಬಂಧಪಟ್ಟವರು ಹೊಂಡ ಮುಚ್ಚುವ ಕಾರ್ಯಕ್ಕೂ ಮುಂದಾಗಿಲ್ಲ. ಇದರಿಂದ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಜನರು ದೂರುತ್ತಾರೆ.

ರಸ್ತೆ ಹೊಂಡಕ್ಕೆ ಹಾಕಿರುವ ಜಲ್ಲಿ ಕಲ್ಲುಗಳು ಎದ್ದು ನಿಂತು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಈ ಸರ್ವಿಸ್‌ ರಸ್ತೆಯ ಬದಿಯ ಪಾದಾಚಾರಿ ಮಾರ್ಗವನ್ನು ಗಿಡಗಂಟಿಗಳು ಆವರಿಸಿದ್ದು, ಜನರು ರಸ್ತೆಯಲ್ಲೇ ನಡೆದಾಡಬೇಕಾದ ಸ್ಥಿತಿ ಇದೆ.

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಈ ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಆದೇಶ ನೀಡಿದರೂ ಎರಡೂ ಕಡೆಗಳಿಂದಲೂ ವಾಹನಗಳು ಸಂಚರಿಸುತ್ತಿರುವುದು ಅಪಾಯ ಆಹ್ವಾನಿಸುತ್ತಿದೆ.

ಈಗ ಮಳೆ ನಿಂತಿದ್ದು, ಸರ್ವಿಸ್‌ ರಸ್ತೆಯನ್ನು ದುರಸ್ತಿ ಮಾಡಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಸರ್ವಿಸ್‌ ರಸ್ತೆ ವಿಸ್ತರಣೆ ಅಗತ್ಯ’

‘ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್‌ವರೆಗೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಗಳ ವಿಸ್ತರಣೆಯು ತುರ್ತು ಅಗತ್ಯವಾಗಿದ್ದು ಸಂಬಂಧಪಟ್ಟವರು ಆಡಳಿತಾತ್ಮಕ ತಾಂತ್ರಿಕ ಮಂಜೂರಾತಿ ಪಡೆದು ರಸ್ತೆ ವಿಸ್ತರಣೆಗೆ ಮುಂದಾಗಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ ಶೆಟ್ಟಿ ಆಗ್ರಹಿಸಿದ್ದಾರೆ.

‘ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಯನ್ನೂ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜನರಿಗೆ ಇನ್ನಷ್ಟು ತೊಂದರೆಯಾಗಲಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಸುತ್ತಿ ಬಳಸಿ ಬರಬೇಕಾಗಿರುವುದರಿಂದ ಈ ಭಾಗದ ಜನರು ರಿಕ್ಷಾಗಳಿಗೆ ದುಬಾರಿ ಬಾಡಿಗೆ ಕೊಡಬೇಕಾದ ಅನಿವಾರ್ಯತೆಯಿದೆ. ದ್ವಿಚಕ್ರ ವಾಹನ ಸವಾರರಿಗೂ ಸರ್ವಿಸ್‌ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಸರ್ವಿಸ್‌ ರಸ್ತೆಯ ವಿಸ್ತರಣೆಯೊಂದಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಪಾದಾಚಾರಿ ಮಾರ್ಗವೂ ಆಗಬೇಕಿದೆ. ಕಿನ್ನಿಮುಲ್ಕಿಯಿಂದ ಬಲಾಯಿಪಾದೆ ವರೆಗಿನ ಸರ್ವಿಸ್‌ ರಸ್ತೆಯನ್ನೂ ವಿಸ್ತರಣೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಅಂಬಲಪಾಡಿ ಸರ್ವಿಸ್‌ ರಸ್ತೆ ವಿಸ್ತರಣೆ ಚಿಂತನೆ ಇಲ್ಲ. ಹದಗೆಟ್ಟಿರುವ ಸರ್ವಿಸ್‌ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಯೂ ಕಾಲ ಮಿತಿಯೊಳಗೆ ಪೂರ್ಣಗೊಳ್ಳಲಿದೆ
-ಕೋಟ ಶ್ರೀನಿವಾಸ ಪೂಜಾರಿ, ಸಂಸದ