ADVERTISEMENT

ಲೈಂಗಿಕ ದೌರ್ಜನ್ಯ: ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ವಿರುದ್ಧ 21 ಪೋಕ್ಸೊ ಪ್ರಕರಣ

ಪತ್ರಕರ್ತನ ವಿಕೃತ ಕೃತ್ಯಕ್ಕೆ ಬೆಚ್ಚಿಬಿದ್ದ ಪೋಷಕರು: ನ್ಯಾಯಾಂಗ ಬಂಧನದಲ್ಲಿ ಆರೋಪಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 12:34 IST
Last Updated 3 ಡಿಸೆಂಬರ್ 2018, 12:34 IST
ಆರೋಪಿಯನ್ನು ಸೋಮವಾರ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 
ಆರೋಪಿಯನ್ನು ಸೋಮವಾರ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.    

ಉಡುಪಿ: ಮುಗ್ಧ ಬಾಲಕರ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ವಿರುದ್ಧ ಇದುವರೆಗೂ 21 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಆರೋಪಿಯೊಬ್ಬನ ವಿರುದ್ಧ ಅತಿಹೆಚ್ಚು ಪೋಕ್ಸೊ ಪ್ರಕರಣಗಳು ದಾಖಲಾಗಿರುವುದು ರಾಜ್ಯದಲ್ಲೇ ಮೊದಲು ಎನ್ನಲಾಗಿದೆ.

ಬೈಂದೂರಿನಲ್ಲಿ 16, ಗಂಗೊಳ್ಳಿಯಲ್ಲಿ 3, ಕೊಲ್ಲೂರು ಹಾಗೂ ಕುಂದಾಪುರದಲ್ಲಿ ತಲಾ 1 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪ್ರಕರಣವನ್ನು ಬಗೆದಷ್ಟು ವಿಸ್ತಾರವಾಗುತ್ತಲೇ ಇದ್ದು, ಆರೋಪಿಯ ವಿಕೃತಿಗಳು ಬಯಲಾಗುತ್ತಿವೆ. ಅಪ್ರಾಪ್ತರಿಂದ ಹಿಡಿದು ವಯಸ್ಕರವರೆಗೂ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ ಎನ್ನುತ್ತಾರೆ ಪೊಲೀಸರು.

ADVERTISEMENT

ಪ್ರಕರಣ ಬಯಲಾಗಿದ್ದು ಹೇಗೆ?
ಕೆಲ ದಿನಗಳ ಹಿಂದೆ ಬೈಂದೂರು ತಾಲ್ಲೂಕಿನಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಬಾಲಕನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ವಿಚಾರ ಬಯಲಾಯಿತು. ಬಳಿಕ, ಪೋಷಕರು ಪೊಲೀಸ್‌ ಠಾಣೆಗೆ ಬಂದು ನಡೆದ ವಿಚಾರವನ್ನು ವಿವರಿಸಿ ದೂರು ದಾಖಲಿಸಿದರು.

ಕೂಡಲೇ ಕುಂದಾಪುರ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ನ.29ರಂದು ಚಂದ್ರ ಹೆಮ್ಮಾಡಿ ಎಂಬಾತನನ್ನು ಬಂಧಿಸಲಾಯಿತು. ಮೂರು ದಿನ ವಿಚಾರಣೆಗೊಳಪಡಿಸಿದಾಗ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ಬಯಲಾಯಿತು ಎಂದು ಎಸ್‌ಪಿ ಮಾಹಿತಿ ನೀಡಿದರು.

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕರನ್ನು ಪತ್ತೆಹಚ್ಚಿ, ವಿಚಾರಣೆ ನಡೆಸುತ್ತಾ ಹೋದಂತೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋದವು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

ಹೇಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ?
ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಚಂದ್ರ ಕೆ.ಹೆಮ್ಮಾಡಿ (40) ರಾಜ್ಯಮಟ್ಟದ ಪತ್ರಿಕೆಯೊಂದರ ಬಿಡಿ ವರದಿಗಾರ. ಉತ್ತಮ ಹಾಡುಗಾರ ಹಾಗೂ ಹವ್ಯಾಸಿ ಛಾಯಾಗ್ರಾಹಕ. ಗ್ರಾಮೀಣ ಭಾಗದಲ್ಲಿರುವ ಶಾಲಾ–ಕಾಲೇಜು ಸಮಾರಂಭಗಳಿಗೆ ವರದಿ ಮಾಡಲು ತೆರಳುತ್ತಿದ್ದ ಆತ, ಕಾರ್ಯಕ್ರಮಗಳ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಶಾಲಾ ಮುಖ್ಯಸ್ಥರ ವಿಶ್ವಾಸ ಗಳಿಸುತ್ತಿದ್ದ.

‘ನಾನೊಬ್ಬ ಉತ್ತಮ ಹಾಡುಗಾರ, ಮಕ್ಕಳಿಗೆ ಗಾಯನ ತರಬೇತಿ ನೀಡಲು ಅವಕಾಶ ಕೊಡಬೇಕು ಎಂದು ಪ್ರಾಂಶುಪಾಲರನ್ನು ಒಪ್ಪಿಸುತ್ತಿದ್ದ. ಮಕ್ಕಳ ಜತೆ ಆತ್ಮೀಯವಾಗಿ ಬೆರೆತು ವಿಶ್ವಾಸಗಳಿಸುತ್ತಿದ್ದ. ಬಳಿಕ ಶಾಲಾ ಸಿಬ್ಬಂದಿ ಬಳಿ ಮಕ್ಕಳ ವಿಳಾಸವನ್ನು ಸಂಗ್ರಹಿಸಿ, ಪತ್ರಕರ್ತನ ಸೋಗಿನಲ್ಲಿ ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದ.

ಗ್ರಾಮೀಣ ಭಾಗದ ರಸ್ತೆಗಳ ಅವ್ಯವಸ್ಥೆ, ಕಾಲುಸಂಕ, ಶಾಲೆಗಳ ದುಸ್ಥಿತಿ, ಕಾಡಿನ ಸೌಂದರ್ಯದ ಕುರಿತು ವರದಿ ಮಾಡಬೇಕಿದೆ. ಈ ಭಾಗದ ಪರಿಚಯವಿಲ್ಲದ ಕಾರಣ, ದಾರಿ ತೋರಿಸಲು ಮಕ್ಕಳನ್ನು ಜತೆಗೆ ಕಳುಹಿಸಿಕೊಡಿ ಎಂದು ಪೋಷಕರನ್ನು ಪುಸಲಾಯಿಸುತ್ತಿದ್ದ. ಮಕ್ಕಳನ್ನುಕಾಡಿನೊಳಗೆ ಕರೆದೊಯ್ದು ಮೊಬೈಲ್‌ನಲ್ಲಿ ಸೆಕ್ಸ್ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

ಪ್ರತಿರೋಧ ತೋರಿದ ಮಕ್ಕಳಿಗೆ ಚಾಕು ತೋರಿಸಿ ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದ. ಹಾಗಾಗಿ, ಬಾಲಕರು ಲೈಂಗಿಕ ದೌರ್ಜನ್ಯ ವಿಚಾರವನ್ನು ಬಾಯಿಬಿಟ್ಟಿರಲಿಲ್ಲ. ಈಗ ಎಲ್ಲವೂ ಬಹಿರಂಗವಾಗುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.