ADVERTISEMENT

‘ಬಾಲಕನಿಗೆ ಶೀರೂರು ಮಠದ ಉತ್ತರಾಧಿಕಾರಿ ಪಟ್ಟ’

ಲಕ್ಷ್ಮೀವರ ತೀರ್ಥ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ವಿರೋಧ: ಕಾನೂನು ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:31 IST
Last Updated 20 ಏಪ್ರಿಲ್ 2021, 16:31 IST
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಕನಿಷ್ಠ 10 ವರ್ಷ ವೇದಾಂತ ಅಧ್ಯಯನ ಮಾಡಿರುವ ಯೋಗ್ಯ ವಟುವನ್ನು ಶೀರೂರು ಮಠಕ್ಕೆ ಉತ್ತರಾಧಿಕಾರಿಯಾಗಬೇಕು ಎಂಬ ಭಕ್ತರ ಆಶಯಕ್ಕೆ ವಿರುದ್ಧವಾಗಿ ಬಾಲಕನಿಗೆ ಉತ್ತರಾಧಿಕಾರಿ ಪಟ್ಟ ಕಟ್ಟಲಾಗುತ್ತಿದೆ ಎಂದು ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೀರೂರು ಮಠದ ಆಸ್ತಿ, ಆಡಳಿತ ಹಾಗೂ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನೂತನ ಉತ್ತರಾಧಿಕಾರಿ ನೇಮಕ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

‘ಮೂರು ವರ್ಷಗಳ ಹಿಂದೆ ಪೇಜಾವರ ಮಠದ ಅಂದಿನ ಯತಿ ವಿಶ್ವೇಶತೀರ್ಥ ಶ್ರೀಗಳ ನೇತೃತ್ವದಲ್ಲಿ ಅಷ್ಠಮಠಗಳಿಗೆ ಉತ್ತರಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸಂವಿಧಾನ ರಚನೆಯಾಗಿತ್ತು. ಕನಿಷ್ಠ 10 ವರ್ಷಗಳ ವೈದಿಕ ಅಧ್ಯಯನ ಮಾಡಿರುವ ಹಾಗೂ ಕನಿಷ್ಠ 21 ವರ್ಷ ವಯಸ್ಸಾಗಿರವ ವಟುವನ್ನು ಮಾತ್ರ ಅಷ್ಠಮಠಗಳಿಗೆ ಉತ್ತರಾಧಿಕಾರಿಯಾನ್ನಾಗಿ ನೇಮಿಸಬೇಕು ಎಂಬ ನಿಯಮ ಮಾಡಲಾಗಿತ್ತು. ಈಗ ಸಂವಿಧಾನದಲ್ಲಿರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

ಶೀರೂರು ಮಠಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಯುವಾಗ ಉತ್ತರಾಧಿಕಾರಿ ನೇಮಕ ಮಾಡಲು ಹೊರಟಿರುವುದು ಕಾನೂನು ಬಾಹಿರ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಲಾತವ್ಯ ಆಚಾರ್ಯ ಎಚ್ಚರಿಕೆ ನೀಡಿದರು.

ಪೂರ್ವಾಶ್ರಮದ ಮತ್ತೋರ್ವ ಸಹೋದರ ವಾದಿರಾಜ ಆಚಾರ್ಯ ಮಾತನಾಡಿ, ‘ಲಕ್ಷ್ಮೀವರ ತೀರ್ಥರು ಮೃತಪಟ್ಟ ಬಳಿಕ ಉತ್ತರಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿದರೂ ಸ್ಪಂದನ ಸಿಗಲಿಲ್ಲ. ಸುದೀರ್ಘ ಅವಧಿಯವರೆಗೂ ಮಠಕ್ಕೆ ಉತ್ತರಾಧಿಕಾರಿ ನೇಮಿಸದಿರುವುದು ಅಷ್ಠಮಠಗಳ ಇತಿಹಾಸದಲ್ಲಿ ಇದೇ ಮೊದಲು’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಳೆದ ಪರ್ಯಾಯ ನಡೆಯುವಾಗಲೂ ಶೀರೂರು ಮಠ ಉತ್ತರಾಧಿಕಾರಿ ಇಲ್ಲದೆ ಖಾಲಿಯಾಗಿ ಉಳಿದಿತ್ತು. ಈ ವಿಚಾರ ಭಕ್ತರಿಗೆ ತೀವ್ರ ನೋವು ತರಿಸಿತ್ತು. ಈಗ ಉತ್ತರಾಧಿಕಾರಿ ನೇಮಕಕ್ಕೆ ಸೋದೆ ಮಠ ಮುಂದಾಗಿದೆ. ಆದರೆ, ಯೋಗ್ಯವಟುವನ್ನು ಆಯ್ಕೆ ಮಾಡದಿರುವ ವಿಚಾರ ಗಮನಕ್ಕೆ ಬಂದಿದೆ’ ಎಂದರು.

‘ಅಷ್ಠಮಠಗಳ ಇತಿಹಾಸದಲ್ಲಿ ದ್ವಂಧ್ವ ಮಠದ ಪದ ಪ್ರಯೋಗವೇ ಇಲ್ಲ. ಬದಲಾಗಿ, ಮಠದ ಪೀಠಾಧಿಪತಿ ಸ್ಥಾನ ತೆರವಾದರೆ ಬೇರೆ ಮಠ ಸಹಾಯ ಮಾಡಬೇಕು ಎಂಬ ನಿಯಮವಿದೆ. ಒಂದು ಮಠದ ಪೀಠಾಧಿಪತಿ ಮತ್ತೊಂದು ಮಠಕ್ಕೆ ಪೀಠಾಧಿಪತಿಯಾಗಲು ಅವಕಾಶವಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಹ್ಲಾದ್ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.