ADVERTISEMENT

ಶೀರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ: ಜಗಮಗಿಸುತ್ತಿದೆ ಕೃಷ್ಣ ಮಠ

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಲಿದೆ ನಗರ

ನವೀನ್ ಕುಮಾರ್ ಜಿ.
Published 12 ಜನವರಿ 2026, 6:57 IST
Last Updated 12 ಜನವರಿ 2026, 6:57 IST
ಶೀರೂರು ಮಠದ ಪ್ರವೇಶ ದ್ವಾರದ ಬಳಿ ಅರಳಿರುವ ಕಾವಿ ಕಲೆ
ಶೀರೂರು ಮಠದ ಪ್ರವೇಶ ದ್ವಾರದ ಬಳಿ ಅರಳಿರುವ ಕಾವಿ ಕಲೆ   

ಉಡುಪಿ: ಶ್ರೀವಾಮನ ತೀರ್ಥ ಪರಂಪರೆಯ ಶೀರೂರು ಮಠದ ವೇದವರ್ಧನತೀರ್ಥ ಶ್ರೀಪಾದರ ಶ್ರೀಕೃಷ್ಣ ದೇವರ ಪೂಜಾ ಕೈಂಕರ್ಯದ ಪ್ರಥಮ ದ್ವೈವಾರ್ಷಿಕ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದ್ದು, ಮಹೋತ್ಸವವನ್ನು ಬರಮಾಡಿಕೊಳ್ಳಲು ಉಡುಪಿ ನಗರ ಸಿದ್ಧಗೊಂಡಿದೆ.

ಶೀರೂರು ಮಠವು ಸುಣ್ಣಬಣ್ಣಗಳಿಂದ ಅಲಂಕಾರಗೊಂಡು, ವಿದ್ಯುತ್‌ದೀಪಗಳಿಂದ ಜಗಮಗಿಸುತ್ತಿದೆ. ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳಿಗೆ ಸಂಚಾರ ನಡೆಸಿದ್ದ ಶೀರೂರು ಶ್ರೀಪಾದರು ಮರಳಿ ಬಂದಿದ್ದು, ಪುರಪ್ರವೇಶ ಅದ್ದೂರಿಯಾಗಿ ನೆರವೇರಿದೆ.

ಪೀಠ ಏರುವ ಮಠಾಧೀಶರು ಜೋಡುಕಟ್ಟೆಯಿಂದ ಪುರಪ್ರವೇಶ ಮಾಡುವುದು ಸಂಪ್ರದಾಯ. ಶೀರೂರು ಮಠಾಧೀಶರು ಮಾತ್ರ ಕಡಿಯಾಳಿ ಮೂಲಕ ಪುರಪ್ರವೇಶ ಮಾಡುತ್ತಾರೆ. ಅದರಂತೆ ಕಡಿಯಾಳಿಯಿಂದ ಪುರಪ್ರವೇಶ ಮೆರವಣಿಗೆ ನಡೆದಿತ್ತು.

ADVERTISEMENT

ಪ್ರತಿದಿನ ವಿವಿಧೆಡೆಯಿಂದ ಹೊರೆಕಾಣಿ ಬರುತ್ತಿದ್ದು, ನಗರದ ಜೋಡುಕಟ್ಟೆಯಿಂದ ಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ನಿರ್ಮಿಸಿರುವ ಉಗ್ರಾಣದವರೆಗೆ ಮೆರವಣಿಗೆ ನಡೆಯುತ್ತಿದೆ. ಇದೇ 17ರವರೆಗೂ ಪ್ರತಿದಿನ ವಿವಿಧ ಸಂಘ ಸಂಘ ಸಂಸ್ಥೆಗಳು, ಸಂಘಟನೆಗಳು ಹೊರೆಕಾಣಿಕೆ ಸಮರ್ಪಣೆ ಮಾಡಲಿವೆ. ರಥಬೀದಿಯಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು, ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.

17ರಂದು ರಾತ್ರಿ 3 ಗಂಟೆಗೆ ನಗರದ ಜೋಡುಕಟ್ಟೆಯಿಂದ ಪರ್ಯಾಯದ ಮೆರವಣಿಗೆ ನಡೆಯಲಿದ್ದು, ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆ ಸಾಗಿಬರುವ ರಸ್ತೆಗಳ ದುರಸ್ತಿ ಕಾರ್ಯ ನಡೆದಿದೆ.

16ನೇ ಶತಮಾನದಲ್ಲಿ ಸೋದೆ ಮಠದ ವಾದಿರಾಜ ಸ್ವಾಮೀಜಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆ ಆರಂಭಿಸಿದ್ದರು. ಇಂದಿಗೂ ಸಂಪ್ರದಾಯದಂತೆ ಪ್ರತಿ 2 ವರ್ಷಗಳಿಗೊಮ್ಮೆ ಪರ್ಯಾಯ ನಡೆಯುತ್ತಿದೆ.

ಸ್ವಾಗತ ಕಮಾನುಗಳು ಸಿದ್ಧ: ಉಡುಪಿ ನಗರವನ್ನು ಪ್ರವೇಶಿಸುವ ವಿವಿಧೆಡೆ ಬೃಹತ್‌ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಮರ, ಮತ್ತು ಬಟ್ಟೆಯನ್ನು ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಮಾನುಗಳನ್ನು ನಿರ್ಮಿಸಲಾಗಿದೆ. 

ಪ್ರತಿ ಪರ್ಯಾಯದ ಸಂದರ್ಭದಲ್ಲೂ ಇಂತಹ ಸ್ವಾಗತ ಕಮಾನುಗಳನ್ನು ನಿರ್ಮಿಸುತ್ತೇವೆ. 20 ಅಡಿಗಿಂತಲೂ ಎತ್ತರವಿರುವ ಒಂದು ಸ್ವಾಗತ ಕಮಾನನ್ನು 5ರಿಂದ 6 ದಿನಗಳ ಕಾಲ ರಾತ್ರಿ ವೇಳೆ ನಿರ್ಮಿಸಿ ಪೂರ್ಣಗೊಳಿಸಿದ್ದೇವೆ ಎಂದು ಕಾರ್ಮಿಕರು ತಿಳಿಸಿದರು.

ಸಿದ್ಧಗೊಂಡಿದೆ ಸ್ವಾಗತ ಕಮಾನು
ಕನಕನ ಕಿಂಡಿಗೆ ವಿದ್ಯುತ್‌ ದೀಪಾಲಂಕಾರ
ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದ
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಶೀರೂರು ಮಠ –ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ

ಗೋಡೆಯಲ್ಲರಳಿದ ಕಾವಿಕಲೆ

ಪರ್ಯಾಯ ಸಂಭ್ರಮದಲ್ಲಿರುವ ಶೀರೂರು ಮಠ ಅತಿಥಿಗೃಹಗಳು ಸೇರಿದಂತೆ ವಿವಿಧ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದಿದ್ದು ಆಕರ್ಷಕವಾಗಿ ಮಿಂಚುತ್ತಿವೆ. ಶೀರೂರು ಮಠದ ಒಳಗೆ ಹಾಗೂ ಮಠವನ್ನು ಪ್ರವೇಶಿಸುವಲ್ಲಿನ ಗೋಡೆಗಳಲ್ಲಿ ಕವಿ ಕಾಲೆಯಲ್ಲಿ ಚಿತ್ತಾರ ಮೂಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಶೀರೂರು ಮಠದ ಪ್ರವೇಶ ದ್ವಾರದಲ್ಲಿ ಜಯ ವಿಜಯರ ಚಿತ್ರಗಳನ್ನು ಮೂಡಿಸಲಾಗಿದೆ.

‘₹50 ಲಕ್ಷದಲ್ಲಿ ವಿದ್ಯುದ್ದೀಪ ಅಲಂಕಾರ’

‘ಶೀರೂರು ಪರ್ಯಾಯಕ್ಕೆ ನರಸಭೆಯ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್‌ದೀಪಾಲಂಕಾರ ಮಾಡಲಾಗುತ್ತಿದೆ. ಕಿನ್ನಿಮುಲ್ಕಿಯಿಂದ ಮಠದವರೆಗೆ ಪರ್ಯಾಯದ ಮೆರವಣಿಗೆ ಸಾಗುವ ದಾರಿಯಲ್ಲಿ ಹಾಗೂ ಕರಾವಳಿ ಬೈಪಾಸ್‌ನಿಂದ ಕಲ್ಸಂಕದವರೆಗೆ ವಿದ್ಯುತ್‌ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ‘ನಗರದ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಕಸದ ತೊಟ್ಟಿ ಇರಿಸಲಾಗುತ್ತದೆ. ಇಪ್ಪತ್ತು ಮೊಬೈಲ್‌ ಶೌಚಾಲಯಗಳನ್ನು ಮಠದ ಪಾರ್ಕಿಂಗ್  ಪ್ರದೇಶದ ಸಮೀಪ ವಿವಿಧೆಡೆ ಅಳವಡಿಸಲಾಗುವುದು. ಕಟ್ಟೆ ಆಚಾರ್ಯ ರಸ್ತೆ ಕನಕದಾಸ ರಸ್ತೆ ಸೇರಿದಂತೆ ಶ್ರೀಕೃಷ್ಣ ಮಠಕ್ಕೆ ತೆರಳುವ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನೆರಡು ದಿವಸಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ₹30 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಭಕ್ತರ ವಾಹನ ಪಾರ್ಕಿಂಗ್‌ಗಾಗಿ ಖಾಸಗಿ ಸ್ಥಳಗಳನ್ನೂ ಗುರುತಿಸಿ ಸ್ವಚ್ಛಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

ರಾಜಾಂಗಣದಲ್ಲಿ ಸಿದ್ಧತೆ

ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವ ಕೃಷ್ಣಮಠದ ರಾಜಾಂಗಣವು ಹೊಸ ರೂಪದಲ್ಲಿ ಕಂಗೊಳಿಸಲಿದೆ. ಪುತ್ತಿಗೆ ಮಠದ ಪರ್ಯಾಯದ ವೇಳೆ ರಾಜಾಂಗಣವನ್ನು ದಶಾವತಾರದ ಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಇದೀಗ ಶೀರೂರು ಪರ್ಯಾಯಕ್ಕಾಗಿ ರಾಜಾಂಗಣವನ್ನು ಹಂಪಿಯ ಶಿಲ್ಪಕಲಾ ವೈಭವ ಸಾರುವ ವಿನ್ಯಾಸದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಹಂಪಿ ಮಾದರಿಯ ಕಂಬಗಳು ಉಬ್ಬಶಿಲ್ಪಗಳು ವೇದಿಕೆಯಲ್ಲಿ ಕಂಗೊಳಿಸಲಿವೆ ಎಂದು ಮಠದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.