ADVERTISEMENT

ಉತ್ತರ ಪ್ರದೇಶಕ್ಕೆ ಹೊರಟ ಶ್ರಮಿಕ್‌ ವಿಶೇಷ ರೈಲು

1,460 ಕೂಲಿ ಕಾರ್ಮಿಕರು ತವರಿಗೆ ಪ್ರಯಾಣ: ಜಿಲ್ಲೆಯಿಂದ ಹೊರಟ ಮೊದಲ ರೈಲು

​ಪ್ರಜಾವಾಣಿ ವಾರ್ತೆ
Published 17 ಮೇ 2020, 15:21 IST
Last Updated 17 ಮೇ 2020, 15:21 IST
ಉಡುಪಿ ರೈಲು ನಿಲ್ದಾಣದಿಂದ ವಿಶೇಷ ಶ್ರಮಿಕ್ ರೈಲಿನ ಮೂಲಕ ಭಾನುವಾರ ಉತ್ತರ ಪ್ರದೇಶಕ್ಕೆ ಹೊರಟ ಕಾರ್ಮಿಕರು
ಉಡುಪಿ ರೈಲು ನಿಲ್ದಾಣದಿಂದ ವಿಶೇಷ ಶ್ರಮಿಕ್ ರೈಲಿನ ಮೂಲಕ ಭಾನುವಾರ ಉತ್ತರ ಪ್ರದೇಶಕ್ಕೆ ಹೊರಟ ಕಾರ್ಮಿಕರು   

ಉಡುಪಿ: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಸಿಲುಕಿದ್ದ ಉತ್ತರ ಪ್ರದೇಶದ 1,460 ಕಾರ್ಮಿಕರು ಭಾನುವಾರ ಶ್ರಮಿಕ್‌ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಿಂದಸಂಜೆ 5.47ಕ್ಕೆ 01626 ಸಂಖ್ಯೆಯ ರೈಲು ಹೊರಟಿದ್ದು, ಮೇ 19ರಂದು ಸಂಜೆ 6.10ಕ್ಕೆ ಉತ್ತರ ಪ್ರದೇಶದ ಬಸ್ತಿ ನಿಲ್ದಾಣವನ್ನು ತಲುಪಲಿದೆ.

ಮಧ್ಯಾಹ್ನ ಬಂದಿದ್ದ ಕಾರ್ಮಿಕರು:ಉತ್ತರ ಪ್ರದೇಶಕ್ಕೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದ ಸಾವಿರಾರು ಕೂಲಿ ಕಾರ್ಮಿಕರು ಮಧ್ಯಾಹ್ನವೇ ನಿಲ್ದಾಣದ ಬಳಿ ಜಮಾಯಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿದರು. ಅಂತರ ಕಾಯ್ದುಕೊಂಡು ನಿಲ್ಲಲು ನಿಲ್ದಾಣಲದ್ಲಿ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.‌

ADVERTISEMENT

ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿ, ಆಹಾರದ ಪೊಟ್ಟಣಗಳನ್ನು ವಿತರಿಸಿ ಬೀಳ್ಕೊಡಲಾಯಿತು. ಕಾರ್ಮಿಕರು ಒಬ್ಬೊಬ್ಬರಾಗಿ ರೈಲು ಹತ್ತಿದರು. ತವರಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.

ಜಿಲ್ಲಾಡಳಿತದಿಂದ ವ್ಯವಸ್ಥೆ:ಲಾಕ್‌ಡೌನ್‌ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಸಿಲುಕಿದ್ದ ಹೊರ ರಾಜ್ಯಗಳ ಕೂಲಿ ಕಾರ್ಮಿಕರನ್ನು ಕಳುಹಿಸಲು ವಿಶೇಷ ಶ್ರಮಿಕ್‌ ರೈಲಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತ ರೈಲ್ವೆ ಇಲಾಖೆಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಇಲಾಕೆ ಮೇ 14ರಂದು ವಿಶೇಷ ರೈಲಿಗೆ ಅನುಮತಿ ನೀಡಿತ್ತು.

ಶೀಘ್ರ ಜಾರ್ಖಂಡ್‌ಗೆ ರೈಲು:ಶೀಘ್ರದಲ್ಲೇ ಜಾರ್ಖಂಡ್‌ಗೆ ವಿಶೇಷ ಶ್ರಮಿಕ್ ರೈಲು ಸಂಚರಿಸುವ ಸಾಧ್ಯತೆಗಳಿದ್ದು, ಅಗತ್ಯ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.