ಬ್ರಹ್ಮಾವರ: ಇಂಡೋನೇಷ್ಯಾದ ಜಕಾರ್ತದಲ್ಲಿ ಜುಲೈನಲ್ಲಿ ನಡೆದ ಅಂತರರಾಷ್ಟೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲ್ಲೂಕಿನ ಕುಮ್ರಗೋಡಿನ ಅಂಚೆ ಚೀಟಿ ಸಂಗ್ರಾಹಕ ಡೇನಿಯಲ್ ಮೊಂತೆರೊ ಅವರು ಪ್ರದರ್ಶಿಸಿದ ನವಿಲುಗಳು ಅಂಚೆ ಚೀಟಿಗಳಿಗೆ ಬೆಳ್ಳಿ ಪದಕ ಲಭಿಸಿದೆ.
ಅವರು ಈ ಹಿಂದೆ ಹಾಂಗ್‌ಕಾಂಗ್, ಚೀನಾ, ಕೊರಿಯ, ದಕ್ಷಿಣ ಆಫ್ರಿಕಾ, ಥೈಲಾಂಡ್, ಇಂಡೋನೇಷ್ಯಾ, ಆಸ್ಟ್ರಿಯಾ, ಬೆಲ್ಜಿಯಂ, ಸಿಂಗಾಪುರ, ಮೆಕಾವೊ, ಬಾಂಗ್ಲಾದೇಶ, ದುಬೈ, ನವದೆಹಲಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ. ಪಕ್ಷಿಗಳ ಅಂಚೆ ಚೀಟಿ ಸಂಗ್ರಹದಲ್ಲಿ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. 2 ಲಿಮ್ಕಾ ದಾಖಲೆ, 3 ಇಂಡಿಯಾಬುಕ್ ಆಫ್ ರೆಕಾರ್ಡ್, ಯೂನಿಕ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಡೇನಿಯಲ್ ಅವರು ದಕ್ಷಿಣ ಕನ್ನಡ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ, ಮಣಿಪಾಲ ವಿಶ್ವವಿದ್ಯಾಲಯ ಅಂಚೆ ಚೀಟಿ, ಮಣಿಪಾಲ ನಾಣ್ಯ ಸಂಗ್ರಾಹಕರ ಸಂಘ, ಬೆಂಗಳೂರಿನ ಕರ್ನಾಟಕ ಪಿಲಾಟೇಲಿಕ್ ಸೊಸೈಟಿಯ ಸದಸ್ಯರಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ ನಡೆಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.