ADVERTISEMENT

ಕುಂದಾಪುರ: ಮಾರಣಕಟ್ಟೆ ದೇವಸ್ಥಾನ: ಸಂಪ್ರದಾಯಬದ್ಧ ಜಾತ್ರೋತ್ಸವ

ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:24 IST
Last Updated 15 ಜನವರಿ 2022, 8:24 IST
ಮಾರಣಕಟ್ಟೆಯಲ್ಲಿ ಶುಕ್ರವಾರ ಮಕರ ಸಂಕ್ರಾಂತಿಯ ಅಂಗವಾಗಿ ನಡೆದ ಧಾರ್ಮಿಕ ಆಚರಣೆಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇಗುಲದ ಧರ್ಮದರ್ಶಿ ಸದಾಶಿವ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಅರ್ಚಕ ಶ್ರೀಧರ ಮಂಜ ಇದ್ದರು.
ಮಾರಣಕಟ್ಟೆಯಲ್ಲಿ ಶುಕ್ರವಾರ ಮಕರ ಸಂಕ್ರಾಂತಿಯ ಅಂಗವಾಗಿ ನಡೆದ ಧಾರ್ಮಿಕ ಆಚರಣೆಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇಗುಲದ ಧರ್ಮದರ್ಶಿ ಸದಾಶಿವ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಅರ್ಚಕ ಶ್ರೀಧರ ಮಂಜ ಇದ್ದರು.   

ಕುಂದಾಪುರ: ತಾಲ್ಲೂಕಿನ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಸರಳವಾಗಿ ನಡೆಯಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಭಕ್ತರು ಬಂದು ಪ್ರಾರ್ಥನೆ ನಡೆಸಿದರು. ಇಲ್ಲಿನ ಜಾತ್ರೆಗಾಗಿ ಮುಂಬೈ, ಬೆಂಗಳೂರು, ಗೋವಾ, ಹುಬ್ಬಳ್ಳಿ, ಬೆಳಗಾವಿ, ಪುಣೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಬಂದಿದ್ದರು.

ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಜಾತ್ರೆಗೆ ಅದ್ಧೂರಿಯಾಗಿ ನಡೆದಿಲ್ಲ. ಈ ವರ್ಷದ ಜಾತ್ರೆ ಹಾಗೂ ಕೆಂಡ ಮಹೋತ್ಸವಗಳು ಯಾವುದೇ ಅಡೆ-ತಡೆಗಳಿಲ್ಲದೆ ನಡೆಯುತ್ತದೆ ಎನ್ನುವ ಹೊತ್ತಿನಲ್ಲಿ ಮತ್ತೆ ಕೋವಿಡ್‌ ಕರಿನೆರಳು ಆವರಿಸಿದೆ. ಹೀಗಾಗಿ, ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ಜಾತ್ರೆ ನಡೆಯುತ್ತಿದೆ.

ADVERTISEMENT

ಬೆಳಿಗ್ಗೆ ದೇವಸ್ಥಾನದಲ್ಲಿ ಅರ್ಚಕ ಶ್ರೀಧರ ಮಂಜ ಅವರ ನೇತೃತ್ವದಲ್ಲಿ ಮಂಗಳಾರತಿ ಹಾಗೂ ಇತರ ವಿಧಿಗಳನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯ ಡಾ.ಅತುಲ ಕುಮಾರ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ನಿವೃತ್ತ ಕೃಷಿ ಇಲಾಖೆಯ ಅಧಿಕಾರಿ ರಘುರಾಮ ಶೆಟ್ಟಿ, ದೇಗುಲದ ಪಾತ್ರಿಗಳಾದ ಶ್ರೀಧರ ಮಾರ್ಡಿ ಹಾಗೂ ಗಣಪಯ್ಯ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಇದ್ದರು.

ತೀರ್ಥ, ಪ್ರಸಾದ ಇರಲಿಲ್ಲ: ದೇವಸ್ಥಾನ ದಲ್ಲಿ ಕೋವಿಡ್ ನಿಯಮಾವಳಿ ಕಡ್ಡಾಯಗೊಳಿಸಲಾಗಿತ್ತು. ಅಂತರ ಪಾಲನೆ ಹಾಗೂ ಮಾಸ್ಕ್ ಧಾರಣೆಯ ಕುರಿತು ಧ್ವನಿವರ್ಧಕದಲ್ಲಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಭಕ್ತರಿಗೆ ಮಾಹಿತಿಗಳನ್ನು ನೀಡಲಾಗುತ್ತಿತ್ತು. ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದೇವರ ಎದುರು ಹರಕೆಯ ವಸ್ತುಗಳನ್ನು ಇಟ್ಟು (ಒಪ್ಪಿಸಿ) ಭಕ್ತರು ಮುಂದುವರಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ತೀರ್ಥ, ಪ್ರಸಾದ ನೀಡುವ ವ್ಯವಸ್ಥೆ ಇರಲಿಲ್ಲ.

ಹೆಮ್ಮಾಡಿ ಹಾಗೂ ಆಸುಪಾಸಿನಲ್ಲಿ ಬೆಳೆಯುವ ಹಳದಿ ಬಣ್ಣದ ಸೇವಂತಿಗೆ ಹೂವುಗಳನ್ನು ಬ್ರಹ್ಮ ಲಿಂಗೇಶ್ವರನಿಗೆ ಮೊದಲ ಅರ್ಪಿಸಬೇಕು ಎನ್ನುವ ವಾಡಿಕೆಗಳು ಇರುವುದರಿಂದ ಸೇವಂತಿಗೆ ಬೆಳೆದ ಬೆಳೆಗಾರರು ದೇವರಿಗೆ ಮಾಲೆಯನ್ನು ಅರ್ಪಿಸುವ ಮೂಲಕ ಧನ್ಯತೆಯನ್ನು ಅನುಭವಿಸಿದರು.

ಬೆಳಿಗ್ಗೆ 11ಗಂಟೆಯ ಬಳಿಕ ಭಕ್ತರ ಸಂಖ್ಯೆ ಜಾಸ್ತಿಯಾಗಿತ್ತು. ಕೊಲ್ಲೂರು ಪೊಲೀಸ್ ಠಾಣೆಯ ಎಸ್‌.ಐ ನಾಸೀರ್ ಹುಸೇನ್‌ ಅವರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕೆಂಡ ಸೇವೆ: ಜಾತ್ರೆಯ ಮೊದಲ ದಿನ ರಾತ್ರಿಯ ವೇಳೆಯಲ್ಲಿ ನಡೆಯುವ ಕೆಂಡ ಸೇವೆಯಲ್ಲಿ ಸಾವಿರಾರು ಮಂದಿ ಭಕ್ತರು ಕೆಂಡದ ರಾಶಿಯನ್ನು ತುಳಿಯುವುದರೊಂದಿಗೆ ಹರಕೆ ತೀರಿಸಿಕೊಳ್ಳುವುದು ದೇವಸ್ಥಾನದ ಪ್ರಮುಖ ಆಚರಣೆಗಳಲ್ಲಿ ಒಂದಾಗಿತ್ತು. ಈ ಸೇವೆಗಾಗಿ ಮಾರಣಕಟ್ಟೆಯ ಬ್ರಹ್ಮ ಲಿಂಗೇಶ್ವರ ದೇವರನ್ನು ನಂಬಿರುವ ದೊಡ್ಡ ಸಂಖ್ಯೆಯ ಭಕ್ತರು ಬರುವುದು ವಾಡಿಕೆ. ಕೋವಿಡ್ ಮಾರ್ಗಸೂಚಿಯ ಕಾರಣದಿಂದಾಗಿ ರಾತ್ರಿಯ ಆಚರಣೆಗೆ ಮಾರ್ಪಾಡು ಮಾಡಿ, ಸಂಜೆ 7ರಿಂದ ರಾತ್ರಿ 10ರ ವರೆಗೆ ನಡೆದ ಕೆಂಡ ಮಹೋತ್ಸವದಲ್ಲಿ ದೇವಸ್ಥಾನದ ಪಾರಂಪರಿಕ ಕೆಂಡ ತುಳಿಯುವ ಕುಟುಂಬಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಮಂಡಲ ಸೇವೆ ನಡೆಸಲಾಗುತ್ತದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.