ADVERTISEMENT

ಕ್ವಾರಂಟೈನ್‌ಗೆ ತೆರಳಬೇಕಾದ ಯುವತಿ ನೇರವಾಗಿ ಮನೆಗೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 15:56 IST
Last Updated 16 ಮೇ 2020, 15:56 IST
   

ಪಡುಬಿದ್ರಿ:ಹೊರ ರಾಜ್ಯದಿಂದ ರೈಲಿನಲ್ಲಿ ಮಂಗಳೂರಿಗೆ ಬಂದ ಯುವತಿಯೊಬ್ಬಳು ಕ್ವಾರಂಟೈನ್‌ಗೆ ಒಳಪಡದೆ ಮನೆ ಸೇರಿದ ಘಟನೆ ಗೊಂದಲಕ್ಕೆ ಕಾರಣವಾಗಿದೆ.

ಕೇರಳದಿಂದ ರೈಲಿನಲ್ಲಿ ಬಂದು ಅಲ್ಲಿಂದ ತಂದೆಯೊಂದಿಗೆ ಬೈಕ್‌ನಲ್ಲಿ ಬಂದ ಯುವತಿಯು ಉಡುಪಿಯ ಹೆಜಮಾಡಿಯ ತಪಾಸಣಾ ಟೋಲ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡುವ ಅರ್ಜಿಯನ್ನು ಭರ್ತಿ ಮಾಡಿ ನೇರವಾಗಿ ತನ್ನ ಊರು ಕುಂದಾಪುರಕ್ಕೆ ತೆರಳಿದ್ದಾಳೆ.

ತಕ್ಷಣಕ್ಕೆ ಎಚ್ಚೆತ್ತ ಅಧಿಕಾರಿಗಳು ಆಕೆಯ ಪತ್ತೆಗೆ ಶ್ರಮಿಸಿದಾಗ ಮೊಬೈಲ್‌ ನಾಟ್‌ರೀಚೆಬಲ್ ಆಗಿತ್ತು. ಮಧ್ಯಾಹ್ನದ ವೇಳೆ ಯುವತಿ ಮನೆ ಸೇರಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಕುಂದಾಪುರ ತಹಶೀಲ್ದಾರ್ ಯುವತಿಗೆ ಕರೆ ಮಾಡಿ ಕ್ವಾರಂಟೈನ್ ತಪ್ಪಿಸಿ ಬಂದಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದ್ದರು.

ADVERTISEMENT

ಆದರೆ, ಯುವತಿ ಮನೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಮನೆಯಲ್ಲಿಯೇ ಇರುವಂತೆ ಆಕೆಗೆ ತಾಕೀತು ಮಾಡಿದ್ದಲ್ಲದೆ, ಭಾನುವಾರ ಮನೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.