ADVERTISEMENT

ಉಡುಪಿ: ವಾರಾಂತ್ಯ ವಾಹನ ದಟ್ಟಣೆಗೆ ಇಲ್ಲವೇ ಪರಿಹಾರ?

ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಕೆ: ಸಿಟಿ ಬಸ್‌ ನಿಲ್ದಾಣ, ಕಡಿಯಾಳಿಯಲ್ಲಿ ವಾಹನಗಳ ಸಾಲು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 7:59 IST
Last Updated 9 ಜೂನ್ 2025, 7:59 IST
   

ಉಡುಪಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಉಡುಪಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ವಾರಾಂತ್ಯಗಳಲ್ಲಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.

ನಗರದ ಕಲ್ಸಂಕ ಜಂಕ್ಷನ್‌, ಮಣಿಪಾಲ ಮತ್ತು ಬನ್ನಂಜೆಯಿಂದ ಕರಾವಳಿ ಬೈಪಾಸ್‌ಗೆ ತೆರಳುವಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಉಂಟಾಗುತ್ತದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸಿ  ವಾಹನಗಳು ತಿರುವು ಪಡೆಯದಂತೆ ತಡೆಯಲಾಗುತ್ತದೆ.

ಕಲ್ಸಂಕದಲ್ಲಿ ರಸ್ತೆಗಳ ನಡುವೆ ಬ್ಯಾರಿಕೇಡ್‌ ಅಳವಡಿಸುತ್ತಿರುವುದರಿಂದ ಶ್ರೀಕೃಷ್ಣ ಮಠದ ಕಡೆಗೆ ಹೋಗುವ ವಾಹನಗಳು ಕಡಿಯಾಳಿ ಸಮೀಪ ತಿರುವು ಪಡೆಯಬೇಕಾಗುತ್ತದೆ. ಗುಂಡಿಬೈಲ್‌ ಕಡೆಗೆ ತೆರಳುವ ವಾಹನಗಳು ಸಿಟಿ ಬಸ್‌ ನಿಲ್ದಾಣದ ಬಳಿ ತಿರುವು ಪಡೆಯಬೇಕಾಗುತ್ತದೆ.

ADVERTISEMENT

ಶನಿವಾರ ಮತ್ತು ಭಾನುವಾರದಂದು ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸುತ್ತಿರುವುದರಿಂದ ಕಲ್ಸಂಕದಲ್ಲಿ ಉಂಟಾಗುವ ವಾಹನ ದಟ್ಟಣೆ ಸಿಟಿ ಬಸ್‌ ನಿಲ್ದಾಣ ಮತ್ತು ಕಡಿಯಾಳಿ ಬಳಿ ಉಂಟಾಗುತ್ತಿದೆ.

ಈ ಹಿಂದೆ ವಾಹನಗಳು ತಿರುವು ಪಡೆಯದಂತೆ ಕಲ್ಸಂಕ ಜಂಕ್ಷನ್‌ನಲ್ಲಿ ತಿಂಗಳುಗಟ್ಟಲೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಬ್ಯಾರಿಕೇಡ್‌ ಅಳವಡಿಸುವುದನ್ನು ವಾರಾಂತ್ಯಕ್ಕೆ ಸೀಮಿತಗೊಳಿಸಲಾಗಿತ್ತು.

ಕಲ್ಸಂಕ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಿದರೆ ವಾಹನ ದಟ್ಟಣೆ ಸಮಸ್ಯೆ ಅಲ್ಪಮಟ್ಟಿಗಾದರೂ ಪರಿಹಾರವಾಗಬಹುದು. ಆದರೆ ಅದಕ್ಕೆ ಸಂಬಂಧಪಟ್ಟವರು ಮುತುವರ್ಜಿ ತೋರಿಸುತ್ತಿಲ್ಲ. ಜಂಕ್ಷನ್‌ಗಳಲ್ಲಿ ಶೀಘ್ರ ಸಿಗ್ನಲ್‌ ದೀಪಗಳನ್ನು ಅಳವಡಿಸಲಾಗುವುದು ಎಂದು ಈ ಹಿಂದೆ ಸಂಬಂಧಪಟ್ಟವರು ಭರವಸೆ ನೀಡಿದ್ದರೂ ಅದು ಈವರೆಗೆ ಈಡೇರಿಲ್ಲ ಎಂದು ಜನರು ದೂರುತ್ತಿದ್ದಾರೆ.

ರಜಾ ದಿನಗಳಲ್ಲಿ ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸಿ ಮಧ್ಯೆ ಬಂದ್‌ ಮಾಡುವುದರಿಂದ ಗುಂಡಿಬೈಲ್‌ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಲೇ ಇವೆ.

ಗುಂಡಿಬೈಲ್‌ಗೆ ಸುತ್ತಿಬಳಸಿ ತೆರಳಬೇಕಿರುವುದರಿಂದ ರಿಕ್ಷಾ ಚಾಲಕರು ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ. ಕಲ್ಸಂಕದಲ್ಲಿ ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಪ್ರಯತ್ನಿಸುತ್ತಿಲ್ಲ ಎಂದು ಗುಂಡಿಬೈಲ್‌ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಸಿಟಿ ಬಸ್‌ ನಿಲ್ದಾಣದ ಬಳಿ ಮತ್ತು ಕಡಿಯಾಳಿಯಲ್ಲಿ ಬಸ್‌ ಸೇರಿದಂತೆ ದೊಡ್ಡವಾಹನಗಳು ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ.

ಕೃಷ್ಣಮಠಕ್ಕೆ ದಿನನಿತ್ಯ ಸಾಕಷ್ಟು ಭಕ್ತರು ಬರುತ್ತಿದ್ದು, ಭಕ್ತರ ವಾಹನಗಳು ಪಾರ್ಕಿಂಗ್‌ ಪ್ರದೇಶಕ್ಕೆ ತೆರಳಲು ಕಲ್ಸಂಕ ಜಂಕ್ಷನ್‌ನಲ್ಲಿ ತಿರುವು ಪಡೆದು ತೆರಳಬೇಕಾಗಿದೆ. ವಾರಾಂತ್ಯದಲ್ಲಿ ಈ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸುವುದರಿಂದ ಭಕ್ತರಿಗೂ ಸಮಸ್ಯೆ ಉಂಟಾಗುತ್ತಿದೆ.

ಆದಿ ಉಡುಪಿಯಿಂದ ಮಲ್ಪೆಗೆ ತೆರಳುವ ಹೆದ್ದಾರಿಯ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಈ ಮಳೆಗಾಲದಲ್ಲೂ ಜನರು ಸಂಕಷ್ಟ ಅನುಭವಿಸಬೇಕಾಗಿದೆ. ಈ ರಸ್ತೆ ಹದಗೆಟ್ಟಿರುವ ಕಾರಣ ಕರಾವಳಿ ಜಂಕ್ಷನ್‌ನಲ್ಲಿ ಕೆಲವು ಸಮಯಗಳಲ್ಲಿ ವಾಹನ ದಟ್ಟಣೆ ಕಂಡು ಬರುತ್ತದೆ.

ನಗರದ ಬಹುತೇಕ ರಸ್ತೆಗಳ ಬದಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಜೋರು ಮಳೆ ಬರುವಾಗ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇಂತಹ ಸಂದರ್ಭಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ.

ನಗರದಲ್ಲಿ ಉಂಟಾಗುವ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕು ಎನ್ನುವುದು ನಗರವಾಸಿಗಳ ಆಗ್ರಹ.

ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ ಅಳವಡಿಸಿರುವುದು 
ಮಣಿಪಾಲ ಮತ್ತು ಕಲ್ಸಂಕ ಜಂಕ್ಷನ್‌ನಲ್ಲಿ ಹೆಚ್ಚು ವಾಹನ ದಟ್ಟಣೆ ಸಮಸ್ಯೆ ಕಾಡುತ್ತಿದ್ದು ಅಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಲು ಶೀಘ್ರ ಟೆಂಡರ್‌ ಕರೆಯಲಾಗುವುದು
ಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ಮಣಿಪಾಲ ಮತ್ತು ಕಲ್ಸಂಕ ಜಂಕ್ಷನ್‌ನಲ್ಲಿ ಹೆಚ್ಚು ವಾಹನ ದಟ್ಟಣೆ ಸಮಸ್ಯೆ ಕಾಡುತ್ತಿದ್ದು ಅಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಲು ಶೀಘ್ರ ಟೆಂಡರ್‌ ಕರೆಯಲಾಗುವುದು
ಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ಕಲ್ಸಂಕದಿಂದ ಬನ್ನಂಜೆವರೆಗೂ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಯಂತ್ರಿಸಿದರೆ ಅರ್ಧದಷ್ಟು ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು
ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
‘ಅಧ್ಯಯನ ನಡೆಸಿ ಕ್ರಮ’
ಕಲ್ಸಂಕ ಜಂಕ್ಷನ್‌ನಲ್ಲಿ ವಾರಾಂತ್ಯದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದ್ದು ಅದನ್ನು ಒಮ್ಮೆಲೇ ನಿಲ್ಲಿಸಲು ಸಾಧ್ಯವಿಲ್ಲ. ಸಮಸ್ಯೆಯ ಕುರಿತು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರವಾಗಿ ಶಾಸಕರ ಜೊತೆಗೆ ಸಭೆ ನಡೆದಿದೆ. ರಸ್ತೆ ಸುರಕ್ಷತಾ ಸಭೆಯಲ್ಲೂ ಈ ಕುರಿತು ಚರ್ಚಿಸಿ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.
ಕಾಮಗಾರಿಯಿಂದಲೂ ವಾಹನ ದಟ್ಟಣೆ
ನಗರದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದಲೂ ವಾಹನ ದಟ್ಟಣೆ ಸಮಸ್ಯೆ ಕಾಡುತ್ತಿದೆ. ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲಾ ವಾಹನಗಳು ಸರ್ವಿಸ್‌ ರಸ್ತೆಗಳಲ್ಲೇ ಸಂಚರಿಸುತ್ತಿವೆ. ಈ ಸರ್ವಿಸ್‌ ರಸ್ತೆ ಅಗಲ ಕಿರಿದಾಗಿರುವುದರಿಂದ ಆಗಾಗ ಇಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಘನ ವಾಹನಗಳು ಸಾಗುವ ಸಂದರ್ಭದಲ್ಲೂ ಇಲ್ಲಿ ಕೆಲವೊಮ್ಮೆ ವಾಹನ ದಟ್ಟಣೆ ಸಮಸ್ಯೆ ಕಾಡುತ್ತದೆ. ಇನ್ನು ಜೋರಾಗಿ ಮಳೆ ಬಂದಾಗ ಸರ್ವಿಸ್‌ ರಸ್ತೆ ಕೆರೆಯಂತಾಗುತ್ತದೆ. ಆಗ ವಾಹನಗಳು ನಿಧಾನ ಗತಿಯಲ್ಲಿ ಸಾಗಬೇಕಾಗುತ್ತದೆ. ಇನ್ನು ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣವಾಗದಿರುವುದೂ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಮೇಲ್ಸೇತುವೆಯ ಗರ್ಡರ್‌ ಅಳವಡಿಸುವ ಕಾರ್ಯ ನಡೆದು ಹಲವು ದಿನಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.