
ಉಡುಪಿ: ನಗರದ ವಿವಿಧೆಡೆ ವಾಹನ ದಟ್ಟಣೆ ಪರಿಹಾರಕ್ಕೆ ಸಿಗ್ನಲ್ ದೀಪಗಳನ್ನು ಅಳವಡಿಸಬೇಕೆಂಬುದು ಜನರ ಬಹು ದಿನಗಳ ಬೇಡಿಕೆಯಾಗಿದ್ದು, ಇದೀಗ ನಗರಸಭೆಯು ಕಲ್ಸಂಕ ಜಂಕ್ಷನ್‌ನಲ್ಲಿ ಸಿಗ್ನಲ್ ದೀಪ ಅಳವಡಿಸುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಇನ್ನೂ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ದೀಪ ಅಳವಡಿಸಬೇಕೆಂಬುದು ಜನರ ಆಗ್ರಹವಾಗಿದೆ.
ನಗರದ ಹಲವೆಡೆ ದಿನನಿತ್ಯ ವಾಹನ ದಟ್ಟಣೆ ಸಮಸ್ಯೆ ಎದುರಾಗುತ್ತಿರುವ ಕಾರಣ ಕರಾವಳಿ ಬೈಪಾಸ್, ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್, ಮಣಿಪಾಲದ ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಬನ್ನಂಜೆ ಮೊದಲಾದ ಕಡೆಯಲ್ಲೂ ಸಿಗ್ನಲ್ ದೀಪಗಳನ್ನು ಅಳವಡಿಸಿದರೆ ಸಮಸ್ಯೆಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಗಬಹುದು ಎನ್ನುವುದು ನಗರವಾಸಿಗಳ ಅಭಿಪ್ರಾಯ.
ಈ ಹಿಂದೆ ಟೈಗರ್ ಸರ್ಕಲ್, ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್ ಮೊದಲಾದೆಡೆ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಅನಂತರ ಅದು ಮೂಲೆ ಗುಂಪಾಗಿತ್ತು. ಕಲ್ಸಂಕ ಜಂಕ್ಷನ್‌ನಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದ್ದು, ಅಲ್ಲಿ ಸಿಗ್ನಲ್ ದೀಪ ಅಳವಡಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು.
ಕೆಲ ವರ್ಷಗಳ ಹಿಂದೆ ಸಿಗ್ನಲ್ ದೀಪಗಳನ್ನು ಅಳವಡಿಸಲು ಕೆಲವೆಡೆ ಬೃಹದಾಕಾರದ ಕಂಬಗಳನ್ನು ಸ್ಥಾಪಿಸಿದರೂ ಅದು ನಿರುಪಯೋಗಿಯಾಗಿತ್ತು. ಕೆಲವೆಡೆ ರಸ್ತೆ ಬದಿಯಲ್ಲಿ ಸಿಗ್ನಲ್ ದೀಪಗಳ ಬೃಹತ್ ಕಂಬಗಳು ಈಗಲೂ ತುಕ್ಕು ಹಿಡಿಯುತ್ತಾ ಬಿದ್ದಿವೆ.
ರಜಾ ದಿನಗಳಲ್ಲಿ ಉಡುಪಿ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದಲೂ ಅವರ ವಾಹನಗಳಿಂದಾಗಿಯೂ ಕಲ್ಸಂಕದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹಲವು ತಿಂಗಳುಗಳ ವರೆಗೆ ಬ್ಯಾರಿಕೇಡ್ ಸ್ಥಾಪಿಸಲಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿತ್ತು.
ಬನ್ನಂಜೆಯಲ್ಲೂ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಶಿರಿಬೀಡು, ಅಂಬಾಗಿಲು, ಜೋಡುಕಟ್ಟೆ ಜಂಕ್ಷನ್‌ಗಳಲ್ಲಿಯೂ ಸಿಗ್ನಲ್ ದೀಪ ಅಳವಡಿಸಬೇಕೆಂಬ ಬೇಡಿಕೆಯೂ ಕೇಳಿ ಬಂದಿತ್ತು.
ರಜಾದಿನಗಳಲ್ಲಿ ಕರಾವಳಿ ಜಂಕ್ಷನ್‌ನಲ್ಲಿಯೂ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಬನ್ನಂಜೆವರೆಗೆ ವಾಹನಗಳು ರಸ್ತೆಯಲ್ಲಿ ನಿಂತಿರುತ್ತವೆ. ಸಿಗ್ನಲ್ ದೀಪಗಳೊಂದಿಗೆ ನಗರದ ಪ್ರಮುಖ ಸ್ಥಳಗಳಿಗಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರ ಅಳವಡಿಸಬೇಕೆಂಬುದು ಕೂಡ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು.
ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಸಿಗ್ನಲ್ ದೀಪಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ
ಸದ್ಯ ಕಲ್ಸಂಕದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸುವ ಕಾರ್ಯ ನಗರಸಭೆ ವತಿಯಿಂದ ನಡೆಯುತ್ತಿದೆ. ಪೊಲೀಸರು ಎಲ್ಲಿ ಸೂಚಿಸುತ್ತಾರೊ ಅಲ್ಲಿ ಸಿಗ್ನಲ್ ದೀಪಗಳನ್ನು ಆಳವಡಿಸಲಾಗುವುದುಮಹಾಂತೇಶ ಹಂಗರಗಿ ಉಡುಪಿ ನಗರಸಭೆ ಪೌರಾಯುಕ್ತ
ಸಿಗ್ನಲ್ ದೀಪಗಳನ್ನು ಕಲ್ಸಂಕ ಜಂಕ್ಷನ್‌ನಲ್ಲಿ ಮಾತ್ರ ಅಳವಡಿಸಿದರೆ ಸಾಲದು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಬೇಕು. ಹಾಗಿದ್ದರೆ ಮಾತ್ರ ವಾಹನ ದಟ್ಟಣೆ ಸಮಸ್ಯೆ ಅಲ್ಪ ಮಟ್ಟಿಗಾದರೂ ಪರಿಹಾರವಾಗಲಿದೆನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
‘ಪರಿಶೀಲಿಸಿ ಅಳವಡಿಕೆ’
ಫ್ರೀ ಲೆಫ್ಟ್ ಇರುವಲ್ಲಿ ಮಾತ್ರ ಸಿಗ್ನಲ್ ದೀಪಗಳನ್ನು ಅಳವಡಿಸಬೇಕಾಗಿದೆ. ಕಲ್ಸಂಕದಲ್ಲಿ ಸೇತುವೆ ನಿರ್ಮಿಸಲು ನಗರಸಭೆಯಿಂದ ₹48 ಲಕ್ಷ ವರ್ಕ್ ಆರ್ಡರ್ ಆಗಿದೆ. ಅಲ್ಲಿ ಸೇತುವೆ ನಿರ್ಮಾಣವಾದ ಕೂಡಲೇ ಸಿಗ್ನಲ್ ದೀಪ ಕಾರ್ಯರೂಪಕ್ಕೆ ಬರಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ‘ಉಳಿದ ಕಡೆಗಳಲ್ಲಿ ಅಧ್ಯಯನ ನಡೆಸಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗುವುದು. ಪ್ರಮುಖ ಜಂಕ್ಷನ್‌ಗಳಲ್ಲಿ ಎಐ ಆಧರಿತ ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತಿದ್ದು ನಗರ ಸಭೆಯ ವ್ಯಾಪ್ತಿಯಲ್ಲಿ ಅಳವಡಿಸಲು ₹ 50 ಲಕ್ಷ ಮಂಜೂರಾಗಿದೆ. ಇವುಗಳ ಅಳವಡಿಕೆಯಾದರೆ ಜಂಕ್ಷನ್‌ಗಳಲ್ಲಿ ನಿಲ್ಲುವ ಪೊಲೀಸರ ಸಂಖ್ಯೆ ಕಡಿಮೆಯಾಗಬಹುದು ಎಂದು ಅವರು ಹೇಳಿದರು.
‘ಜೋಡಿಸಿದರೆ ಸಾಲದು ನಿರ್ವಹಣೆ ಮುಖ್ಯ’ ‘
ನಮ್ಮ ದೇಶದ ಪರಿಸ್ಥಿತಿಯೊ ನಮ್ಮ ಉಡುಪಿಯ ಪರಿಸ್ಥಿತಿಯೊ ಗೊತ್ತಿಲ್ಲ. ಅದು ರಸ್ತೆ ನಿರ್ಮಾಣವಿರಬಹುದು ಸಿಗ್ನಲ್ ದೀಪ ಇರಬಹುದು ಸಿ.ಸಿ.ಟಿ.ವಿ. ಕ್ಯಾಮೆರಾ ಇರಬಹುದು ಎಲ್ಲವನ್ನೂ ಚೆನ್ನಾಗಿ ತಂದು ಜೇೂಡಿಸುವುದರಲ್ಲಿ ಆಸಕ್ತಿ ತೇೂರಿಸುವಷ್ಟು ಕಾಳಜಿ ಅದರ ನಿರ್ವಹಣೆ ಕಡೆ ತೇೂರಿಸುವುದಿಲ್ಲ. ಅದು ಕೆಟ್ಟು ಹೇೂದರೆ ಆ ಕಡೆ ಮುಖ ಹಾಕಿಯೂ ನೋಡುವುದಿಲ್ಲ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ‘ಬೀದಿ ದೀಪಗಳು ಹಾಳಾದರೂ ತಿಂಗಳುಗಟ್ಟಲೆ ಆ ಕಡೆ ನೇೂಡುವವರೇ ಇಲ್ಲ. ವಿದ್ಯುನ್ಮಾನ ವಸ್ತುಗಳು ಹಾಳಾಗುವುದು ಸಾಮಾನ್ಯ. ಅದು ಕೆಟ್ಟಿದೆಯಾ ಕೆಲಸ ಮಾಡುತ್ತಿದೆಯಾ ಎಂದು ನೇೂಡುವ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವ ಇಲಾಖೆಯೇ ನಮ್ಮಲ್ಲಿ ಇಲ್ಲ. ಬೇರೆ ದೇಶಗಳಲ್ಲಿ ಹಾಗಲ್ಲ ಪ್ರತಿನಿತ್ಯ ಅದರ ಕಾರ್ಯದಕ್ಷತೆಯನ್ನು ವೀಕ್ಷಣೆ ಮಾಡುವ ಇಲಾಖೆಯೇ ಇದೆ’ ಎನ್ನುತ್ತಾರೆ ಅವರು. ‘ಉಡುಪಿ ಮಣಿಪಾಲ ಮುಂತಾದ ಕಡೆಗಳಲ್ಲಿ ಹಲವು ಬಾರಿ ಸಿಗ್ನಲ್ ದೀಪ ಹಾಕಿ ನಾಲ್ಕು ದಿನ ಕೆಲಸ ಮಾಡಿ ಮತ್ತೆ ಅಲ್ಲಿಯೇ ಕಾಗೆ ಗೂಡು ಕಟ್ಟಿದನ್ನು ನಾವು ನೇೂಡಿದ್ದೇವೆ. ಎಲ್ಲಿಯ ತನಕ ನಿರ್ವಹಣಾ ಜವಾಬ್ದಾರಿ ಸಂಬಂಧಪಟ್ಟ ಇಲಾಖೆ ತೆಗೆದುಕೊಳ್ಳುವ ವ್ಯವಸ್ಥೆ ಇರುವುದಿಲ್ಲವೊ ಅಲ್ಲಿಯ ತನಕ ಸಿಗ್ನಲ್ ಲೈಟ್ ಹಾಕುವುದರಿಂದ ಏನು ಪ್ರಯೇೂಜನವಿಲ್ಲ’ ಎಂದೂ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.