
ಉಡುಪಿ: ಕೊರಗ ಮತ್ತು ಮಲೆಕುಡಿಯರು ಜಿಲ್ಲೆಯಲ್ಲಿ ಪ್ರಮುಖ ಅರಣ್ಯ ಬುಡಕಟ್ಟು ಸಮುದಾಯದವರಾಗಿದ್ದು, ಪ್ರತಿ ಬಜೆಟ್ ಬರುವಾಗಲೂ ಇವರಲ್ಲಿ ಹಲವು ನಿರೀಕ್ಷೆಗಳು ಮೂಡಿರುತ್ತವೆ. ಆದರೆ ಸಾಕಾರಗೊಂಡಿರುವುದು ಮಾತ್ರ ಕೆಲವಷ್ಟೇ.
ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪಿಗೆ (ಪಿ.ವಿ.ಜಿ.ಟಿ) ಸೇರಿರುವ ಕೊರಗ ಸಮುದಾಯದವರು ಸರ್ಕಾರಿ ನೌಕರಿಯಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ. ಪ್ರತಿ ಬಾರಿ ಹೋರಾಟ ನಡೆಸಿದಾಗಲೂ ಸರ್ಕಾರದಿಂದ ಸಿಗುವ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದುಕೊಂಡಿವೆ ಎನ್ನುತ್ತಾರೆ ಈ ಸಮುದಾಯದವರು.
ಕೊರಗ ಸಮುದಾಯದ ಯುವಜನರು ಉನ್ನತ ಶಿಕ್ಷಣ ಪಡೆದರೂ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಇತರ ಪ್ರಬಲ ಸಮುದಾಯದವರೊಂದಿಗೆ ಸ್ಪರ್ಧಿಸಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಸಮುದಾಯದವರ ಅಳಲು. ಉದ್ಯೋಗದಲ್ಲಿ ನೇರ ನೇಮಕಾತಿ ನೀಡಬೇಕೆಂದು ವರ್ಷಗಳಿಂದ ಅವರು ಆಗ್ರಹಿಸುತ್ತಿದ್ದರೂ ಅದು ಇನ್ನೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.
‘ಕಳೆದ ಬಜೆಟ್‌ನಲ್ಲಿ 13 ಬುಡಕಟ್ಟು ಸಮುದಾಯದವರಿಗೆ ಉದ್ಯೋಗದಲ್ಲಿ ನೇರ ನೇಮಕಾತಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದರಿಂದ ಮತ್ತೆ ನಮ್ಮ ಯುವಜನರು ಉದ್ಯೋಗಕ್ಕಾಗಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪಿ.ವಿ.ಜಿ.ಟಿ. ಅಡಿಯಲ್ಲಿ ನಮಗೆ ಪ್ರತ್ಯೇಕವಾಗಿ ನೇರ ನೇಮಕಾತಿ ನೀಡಬೇಕು’ ಎನ್ನುತ್ತಾರೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ– ಕೇರಳ ಅಧ್ಯಕ್ಷೆ ಸುಶೀಲಾ ನಾಡ.
ಸರ್ಕಾರದ ವಸತಿ ಯೋಜನೆಯಾಗಲಿ, ಪೌಷ್ಟಿಕ ಆಹಾರ, ಆರೋಗ್ಯ ಸೇವೆಗಳಾಗಲಿ ಬುಡಕಟ್ಟು ಸಮುದಾಯದವರಿಗೆ ಸಮರ್ಪಕವಾಗಿ ತಲುಪುವುದೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.
ಮಲೆಕುಡಿಯ ಸಮುದಾಯದವರು ವಾಸಿಸುವ ಈದು, ನೂರಾಲ್‌ಬೆಟ್ಟು ಮೊದಲಾದ ಪ್ರದೇಶಗಳಿಗೆ ರಸ್ತೆ ಸೇರಿದಂತೆ ಮೂಲಸೌಕರ್ಯಗಳು ಇನ್ನೂ ತಲುಪಿಲ್ಲ. ಅದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆಗಳೂ ಆ ಸಮುದಾಯದವರಿಂದ ಕೇಳಿ ಬಂದಿದೆ.
ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಮತ್ತಾವಿನ ಜನರ ಹಲವು ದಶಕಗಳ ಬೇಡಿಕೆಯಾದ ಮತ್ತಾವು ಸೇತುವೆ ನಿರ್ಮಾಣ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಅಲ್ಲಿನ ಜನರು.
‘ಮಲೆಕುಡಿಯ ಸಮುದಾಯದವರಲ್ಲಿ ಸಮರ್ಪಕ ಭೂ ದಾಖಲೆಗಳಿಲ್ಲದ ಕಾರಣ ಅವರು ವಸತಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ವಸತಿ ಯೋಜನೆಯನ್ನು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ತರಬೇಕು. ಅವರು ಸ್ಥಳ ಪರಿಶೀಲನೆ ನಡೆಸಿ ಮನೆ ಮಂಜೂರು ಮಾಡುವಂತಾಗಬೇಕು’ ಎನ್ನುತ್ತಾರೆ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ.
ಅತ್ಯಂತ ಹಿಂದುಳಿದ ಕೊರಗ ಸಮುದಾಯದವರಿಗೆ ಪಿ.ವಿ.ಜಿ.ಟಿ. ಅಡಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ನೀಡಲು ಸರ್ಕಾರವು ಮುಂದಾಗಬೇಕುಸುಶೀಲಾ ನಾಡ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.