ಉಡುಪಿಯ ಕುಂಜಿಬೆಟ್ಟು ಬಳಿ ಹೊದಿಕೆ ಅಳವಡಿಸದೆ ಲಾರಿಯಲ್ಲಿ ಮಣ್ಣು ಸಾಗಿಸುತ್ತಿರುವುದು
ಉಡುಪಿ: ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ಮಣ್ಣು, ಮರಳು, ಕಗ್ಗಲ್ಲು ಸಾಗಿಸುವ ಲಾರಿಗಳು ನಗರದೆಲ್ಲೆಡೆ ತೆರೆದ ಸ್ಥಿತಿಯಲ್ಲೇ ಸಂಚರಿಸುತ್ತಿರುವುದು ಬಿರು ಬಿಸಿಲಿನ ವಾತಾವರಣದಲ್ಲಿ ವಾಯುವಾಲಿನ್ಯದ ಜೊತೆಗೆ ವಾಹನ ಸವಾರರಿಗೂ ಕಂಟಕವಾಗಿ ಪರಿಣಮಿಸುತ್ತಿವೆ.
ನಗರದ ಕುಂಜಿಬೆಟ್ಟು, ಅಂಬಲಪಾಡಿ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಪರ್ಕಳ, ಮಣಿಪಾಲ,ಹಿರಿಯಡ್ಕ ಮೊದಲಾದೆಡೆ ಇಂತಹ ವಾಹನಗಳ ಹಾವಳಿ ಮಿತಿ ಮೀರಿದೆ. ಸುರಕ್ಷತೆಗಾಗಿ ಟಾರ್ಪಲ್ ಮುಚ್ಚಬೇಕೆಂದು ಸಂಬಂಧಪಟ್ಟವರು ಸೂಚನೆ ನೀಡಿದರೂ ಇಂತಹ ಲಾರಿಗಳ ಚಾಲಕರು ಕ್ಯಾರೆ ಅನ್ನುತ್ತಿಲ್ಲ. ಇಂತಹ ವಾಹನಗಳ ಅತಿ ವೇಗದ ಚಾಲನೆ ಕೂಡ ಭಯ ಹುಟ್ಟಿಸುತ್ತಿದೆ ಎನ್ನುತ್ತಾರೆ ಜನರು.
ಕಾಂಕ್ರಿಟ್ ಕಾಮಗಾರಿ ನಡೆಯುವ ಸ್ಥಳಗಳಿಗೆ ಕಾಂಕ್ರಿಟ್ ಸಾಗಿಸುವ ರೆಡಿ ಮಿಕ್ಸ್ ವಾಹನಗಳು ಕೂಡ ತೆರೆದ ಸ್ಥಿತಿಯಲ್ಲೇ ಸಂಚರಿಸುತ್ತಿದ್ದು, ಅದರಿಂದ ಬೀಳುವ ಕಾಂಕ್ರಿಟ್ ಮಿಶ್ರಿತ ಜಲ್ಲಿಕಲ್ಲುಗಳು ರಸ್ತೆಯನ್ನು ಹದಗೆಡಿಸುವುದರ ಜೊತೆಗೆ ದ್ವಿಚಕ್ರ ವಾಹನಗಳ ಅಪಘಾತಗಳಿಗೂ ಕಾರಣವಾಗುತ್ತಿವೆ.
ನಗರದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ, ಅಪಾರ್ಟ್‌ಮೆಂಟ್ ಮೊದಲಾದವುಗಳ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿ ಸಾಗಿಸುತ್ತಿರುವ ಟಿಪ್ಪರ್ ಲಾರಿ ಹಾಗೂ ಇತರ ವಾಹನಗಳು ಮುಂಜಾಗ್ರತಾ ಕ್ರಮ ವಹಿಸಿಕೊಳ್ಳುತ್ತಿಲ್ಲ ಎಂದು ದೂರುತ್ತಾರೆ ನಾಗರಿಕರು.
ಕೆಂಪು ಮಣ್ಣು ಸಾಗಿಸುವ ಲಾರಿಗಳಿಂದ ದೂಳು ಉಂಟಾಗಿ ದ್ವಿಚಕ್ರ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜೊತೆಗೆ ಲಾರಿಗಳಿಂದ ಬೀಳುವ ಮಣ್ಣು ರಸ್ತೆಯಲ್ಲೇ ಸಂಗ್ರಹವಾಗಿ ರಸ್ತೆ ಹದಗೆಡುತ್ತಿದೆ. ಇಂತಹ ನೂರಾರು ಲಾರಿಗಳು ದಿನನಿತ್ಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿವೆ.
ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಕಾಂಕ್ರಿಟ್ ಸಾಗಿಸುವ ರೆಡಿ ಮಿಕ್ಸ್ ವಾಹನಗಳಲ್ಲಿ ಮಿತಿಗಿಂತ ಅಧಿಕ ಕಾಂಕ್ರಿಟ್ ತುಂಬಲಾಗುತ್ತಿದೆ ಈ ಕಾರಣಕ್ಕೆ ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲುಗಳು ರಸ್ತೆಗೆ ಬೀಳುತ್ತವೆ ಎನ್ನುವುದು ನಾಗರಿಕರ ಆರೋಪ.
ಹಿರಿಯಡ್ಕ, ಪರ್ಕಳ ಮೊದಲಾದೆಡೆ ರಸ್ತೆಗಳ ತಿರುವಿನಲ್ಲಿ ರೆಡಿಮಿಕ್ಸ್ ವಾಹನಗಳಿಂದ ಕಾಂಕ್ರಿಟ್ ರಸ್ತೆಗೆ ಬಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ. ರಸ್ತೆಗೆ ಬೀಳುವ ಕಾಂಕ್ರಿಟ್ ರಸ್ತೆಗೆ ಅಂಟಿಕೊಳ್ಳುತ್ತದೆ. ಇದು ಇತರ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ನಗರದ ಬಹುತೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿದ್ದು, ಕೆಲವೆಡೆ ಕಿರಿದಾದ ಸರ್ವಿಸ್ ರಸ್ತೆಗಳಲ್ಲೇ ವಾಹನಗಳು ಸಂಚರಿಸುತ್ತವೆ. ಈ ನಡುವೆ ಮಣ್ಣು ಸಾಗಿಸುವ ಲಾರಿಗಳು ಸಂಚಾರ ನಡೆಸುವುದರಿಂದ ವಾಹನ ಸವಾರರಿಗೆ ಇನ್ನಷ್ಟು ತೊಂದರೆ ಉಂಟಾಗುತ್ತಿದೆ.
ಮಣ್ಣು, ಕಲ್ಲು ಸಾಗಿಸುವ ಕೆಲವು ಲಾರಿಗಳು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಹರಿದ ಟಾರ್ಪಲ್‌ಗಳನ್ನು ಮುಚ್ಚುತ್ತವೆ.ಇದರಿಂದ ದುಳು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಜನರು.
ಹಳೆಯ ಕಟ್ಟಡ ಕೆಡವಿದ ಕಲ್ಲು, ಮಣ್ಣು, ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಸಾಗಿಸುವ ವಾಹನಗಳು ಯಾವುದೇ ಹೊದಿಕೆ ಹಾಕದೆ ನಗರದಲ್ಲಿ ರಾಜಾರೋಷವಾಗಿ ಸಂಚಾರ ನಡೆಸಿದರೂ ಸಂಬಂಧಪಟ್ಟವರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುತ್ತಾರೆ ನಗರವಾಸಿಗಳು.
ಹೊದಿಕೆ ಹಾಕದೆ ಕಲ್ಲು, ಮಣ್ಣು ಸಾಗಿಸುವ ಲಾರಿಗಳಿಗೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದೂ ಆಗ್ರಹಿಸಿದ್ದಾರೆ.
‘ಸೂಚನೆ ಪಾಲಿಸದಿದ್ದರೆ ಕ್ರಮ’
ಕಲ್ಲು ಮಣ್ಣು ಸಾಗಿಸುವ ಲಾರಿಗಳು ಹೊದಿಕೆ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನೊಮ್ಮೆ ಅವರಿಗೆ ಎಚ್ಚರಿಕೆ ನೀಡಲಾಗುವುದು. ಸೂಚನೆ ಪಾಲಿಸದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಹದಗೆಡುತ್ತಿವೆ ರಸ್ತೆಗಳು
ಕಲ್ಲು ಮಣ್ಣು ಸಾಗಿಸುವ ಲಾರಿಗಳು ದಿನದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಸಂಚಾರ ನಡೆಸುವುದರಿಂದ ಅವುಗಳು ಸಂಚಾರ ನಡೆಸುವ ರಸ್ತೆಗಳು ತೀರಾ ಹದಗೆಡುತ್ತಿವೆ. ಕೆಲವು ರಸ್ತೆಗಳು ಈಗಾಗಲೇ ಬಿರುಕು ಬಿಟ್ಟಿವೆ. ಅಂಬಲಪಾಡಿಯ ಸರ್ವಿಸ್ ರಸ್ತೆ ಕುಂಜಿಬೆಟ್ಟು ಮೊದಲಾದೆಡೆ ಇಂತಹ ಲಾರಿಗಳ ಮಿತಿ ಮೀರಿದ ಓಡಾಟದಿಂದ ರಸ್ತೆಗಳು ಹದಗೆಟ್ಟಿವೆ. ರಸ್ತೆಯಲ್ಲಿ ಸಂಗ್ರಹಗೊಳ್ಳುವ ಮಣ್ಣು ಮಳೆ ಬಂದಾಗ ಕೆಸರಾಗಿ ಪರಿವರ್ತನೆಗೊಂಡು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡುತ್ತದೆ.
‘ಸಂಬಂಧಪಟ್ಟವರು ಕ್ರಮ ಕೈಗೊಳ್ಳಿ’
ಹಿರಿಯಡ್ಕ ಪರ್ಕಳ ಮೊದಲಾದೆಡೆ ಗುಡ್ಡ ಅಗೆದು ಕೆಂಪು ಮಣ್ಣನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಅಂತಹ ಲಾರಿಗಳಿಗೆ ಟಾರ್ಪಲ್ ಮುಚ್ಚದಿರುವುದರಿಂದ ದೂಳಿನ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ. ಕಾಂಕ್ರಿಟ್ ಸಾಗಿಸುವ ರೆಡಿಮಿಕ್ಸ್ ಲಾರಿಗಳಿಂದಲೂ ಮಣಿಪಾಲ ಪರ್ಕಳ ಹಿರಿಯಡ್ಕ ಮೊದಲಾದೆಡೆ ರಸ್ತೆಗಳು ಹದಗೆಡುತ್ತಿವೆ. ಸುರಕ್ಷತಾ ಮಾನದಂಡವನ್ನು ಪಾಲಿಸುವಂತೆ ಆ ವಾಹನದವರಿಗೆ ಸಂಬಂಧಪಟ್ಟವರು ಸೂಚನೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.
ಅಂಬಲಪಾಡಿಯಲ್ಲಿ ಸರ್ವಿಸ್ ರಸ್ತೆಗಳು ಮೊದಲೇ ಹದಗೆಟ್ಟಿವೆ. ಅದರೊಂದಿಗೆ ಮಣ್ಣು ಸಾಗಿಸುವ ಟಿಪ್ಪರ್ ಲಾರಿಗಳ ಸಂಚಾರವೂ ಹೆಚ್ಚಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.ಅಭಿಷೇಕ್, ಸ್ಥಳೀಯ ನಿವಾಸಿ
ಮಣ್ಣು ಸಾಗಿಸುವ ಲಾರಿಗಳಿಗೆ ಹೊದಿಕೆ ಹಾಕದ ಕಾರಣ ಮಣ್ಣು ರಸ್ತೆಗೆ ಬಿದ್ದು ಸಂಗ್ರಹಗೊಳ್ಳುತ್ತಿದೆ. ಇದರಿಂದ ಘನ ವಾಹನಗಳು ಸಂಚರಿಸುವಾಗ ದೂಳು ಏಳುತ್ತದೆ.ಸೀತಾರಾಮ, ಮಣಿಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.