ADVERTISEMENT

ಉಡುಪಿಯಲ್ಲಿ 2 ದಿನಗಳಲ್ಲಿ 644 ಸಮಾರಂಭ

ಕೋವಿಡ್‌ ಮಾರ್ಗಸೂಚಿ ಪಾಲನೆ: ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 14:08 IST
Last Updated 25 ಏಪ್ರಿಲ್ 2021, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಆದೇಶದ ನಡುವೆಯೂ ಏ.25 ಹಾಗೂ 26ರಂದು ಜಿಲ್ಲೆಯಲ್ಲಿ ಬರೋಬ್ಬರಿ 644 ಸಮಾರಂಭಗಳು ನಿಗಧಿಯಾಗಿದ್ದು, ಭಾನುವಾರ 354 ಸಮಾರಂಭಗಳು ನಡೆದವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

644 ಸಮಾರಂಭಗಳ ಪೈಕಿ ಬೆರಳೆಣಿಕೆಯಷ್ಟು ಉಪನಯನ ಹಾಗೂ ಖಾಸಗಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಮದುವೆ ಸಮಾರಂಭಗಳಾಗಿವೆ. ಭಾನುವಾರ 354 ಸಮಾರಂಭಗಳು ನಡೆದಿದ್ದು, ಕೋವಿಡ್‌ ಮಾರ್ಗಸೂಚಿಗಳು ಉಲ್ಲಂಘನೆಯಾಗಿಲ್ಲ. ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಹಿತಿ ನೀಡಿದರು.

ಮದುವೆ ಸಮಾರಂಭಗಳಲ್ಲಿ 50 ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬ ನಿಯಮಗಳಿವೆ. ಈ ಸಂಬಂಧ ಮಾರ್ಗಸೂಚಿ ಉಲ್ಲಂಘನೆಯಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ನಗರ ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳನ್ನು ಪರಿಶೀಲಿಸಲು ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪಿಡಿಒ, ಬಿಲ್‌ ಕಲೆಕ್ಟರ್‌ ಸೇರಿದಂತೆ ಬೇರೆ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೀಕೆಂಡ್ ಕರ್ಫ್ಯೂ ಇರುವುದರಿಂದ ಪಾಸ್ ಇದ್ದವರಷ್ಟೆ ಮದುವೆಗೆ ಹಾಜರಾಗಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ಬಹುತೇಕರು ಸುರಕ್ಷತಾ ನಿಯಮಗಳನ್ನು ಪಾಲಿಸಿರುವುದು ಕಂಡುಬಂದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಯಾವ ತಾಲ್ಲೂಕಿನಲ್ಲಿ ಎಷ್ಟು ಸಮಾರಂಭ

ಭಾನುವಾರ ಕಾರ್ಕಳ ತಾಲ್ಲೂಕಿನಲ್ಲಿ 41, ಹೆಬ್ರಿಯಲ್ಲಿ 12, ಕುಂದಾಪುರದಲ್ಲಿ 91, ಬೈಂದೂರಿನಲ್ಲಿ 54, ಉಡುಪಿಯಲ್ಲಿ 71, ಕಾಪುವಿನಲ್ಲಿ 30 ಬ್ರಹ್ಮಾವರದಲ್ಲಿ 55 ಸಮಾರಂಭಗಳು ನಡೆದರೆ, ಸೋಮವಾರ ಕಾರ್ಕಳದಲ್ಲಿ 17, ಹೆಬ್ರಿಯಲ್ಲಿ 4, ಕುಂದಾಪುರದಲ್ಲಿ 152, ಬೈಂದೂರಿನಲ್ಲಿ 25, ಉಡುಪಿಯಲ್ಲಿ 51, ಕಾಪುವಿನಲ್ಲಿ 17 ಹಾಗೂ ಬ್ರಹ್ಮಾವರದಲ್ಲಿ 24 ಸಮಾರಂಭಗಳು ನಿಗಧಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.