ADVERTISEMENT

ಯಕ್ಷಗಾನ ಹೊಸತನ ಬೆಸೆದು ಸಾಗಲಿ: ಶ್ರೀನಿವಾಸ ಉಡುಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:57 IST
Last Updated 26 ಜನವರಿ 2023, 4:57 IST
ಕೋಟ ಪಟೇಲರ ಮನೆಯ ಅಂಗಳದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ದಿ.ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕೋಟ ಪಟೇಲರ ಮನೆಯ ಅಂಗಳದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ದಿ.ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕೋಟ (ಬ್ರಹ್ಮಾವರ): ‘ಸಾಮಾಜಿಕ ವ್ಯವಸ್ಥೆ ಬದಲಾದಂತೆ ಯಕ್ಷಗಾನದ ಪರಂಪರೆಯೂ ಹೊಸತನವನ್ನು ಬೆಸೆದುಕೊಂಡು ಸಾಗುತ್ತಿರಬೇಕು’ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹೇಳಿದರು.

ಸಾಲಿಗ್ರಾಮ ಮಕ್ಕಳ ಮೇಳ ಆಯೋಜನೆಯಲ್ಲಿ ಕೋಟದ ಪಟೇಲರ ಮನೆಯ ಅಂಗಣದಲ್ಲಿ ನಡೆದ ಕಲಾ ಸಾಹಿತಿ, ಮಕ್ಕಳ ಮೇಳದ ಸಂಸ್ಥಾಪಕರಲ್ಲೊಬ್ಬರಾದ ದಿ.ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಹಾರಾಡಿ ಮಟಪಾಡಿ ಯಕ್ಷಗಾನ ಶೈಲಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಉಡುಪರು, ಹಂದೆಯವರು ಸಾಲಿಗ್ರಾಮ ಮಕ್ಕಳ ಮೇಳದ ಮೂಲಕ ಮಾಡಿರುವುದು ಅಭಿನಂದನೀಯ’ ಎಂದರು.

ADVERTISEMENT

ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಬೆಂಗಳೂರಿನ ಲಿಯೋಸ್ ಇಸ್ರೋನ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಎಚ್.ಗಣೇಶ್ ಶಾನುಭಾಗ್ ಮಾತನಾಡಿ, ‘ತಾವು ಬಾಲ್ಯದಲ್ಲಿ ಕಂಡುಂಡ ಯಕ್ಷಗಾನದ ಪರಂಪೆರೆಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳ ಮೇಳದ ಕನಸು ಕಂಡವರು ಕಾರ್ಕಡ ಶ್ರೀನಿವಾಸ ಉಡುಪರು’ ಎಂದು ಹೇಳಿದರು.

ಧಾರೇಶ್ವರ ದಂಪತಿಯನ್ನು ಗೌರವಿಸಲಾಯಿತು. ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಮಹೇಶ ಉಡುಪ ಅಧ್ಯಕ್ಷತೆ ವಹಿಸಿದ್ದರು.

ಹೈದರಾಬಾದ್‌ನ ಯಕ್ಷಗಾನ ಪೋಷಕ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜ, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಮಕ್ಕಳ ಮೇಳದ ಸ್ಥಾಪಕ ಎಚ್., ಶ್ರೀಧರ ಹಂದೆ, ಅನ್ನಪೂರ್ಣ ಉಡುಪ, ಕೆ.ಶ್ರೀಧರ ಉಡುಪ, ವಿನಿತ್‌ ಹಂದೆ ಇದ್ದರು.

ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ಸ್ವಾಗತಿಸಿದರು. ಮಂಗಳೂರಿನ ಕಲಾಪೋಷಕ ಜನಾರ್ದನ ಹಂದೆ ಎಚ್. ವಂದಿಸಿದರು. ಕಾರ್ಯದರ್ಶಿ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

ನಂತರ ಸುಬ್ರಹ್ಮಣ್ಯ ಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ ಮತ್ತು ಬಳಗದವರಿಂದ ‘ಯಕ್ಷ ರಸಗಾನ ಸುಧಾ’, ಡಾ.ಶ್ರೀಪಾದ ಭಟ್ ಪರಿಕಲ್ಪನೆಯ, ಕಾವ್ಯ ಹಂದೆ ಅಭಿನಯದ ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ನಾಟಕ ಪ್ರದರ್ಶನ, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಗಾಂಗೇಯ’ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.