ADVERTISEMENT

ಉಡುಪಿ| ಸೃಷ್ಟಿಶೀಲ ಮನಸ್ಸಿಗೆ ಎಐನಿಂದ ಕುತ್ತು: ಟಿ.ಎನ್.ಸೀತಾರಾಮ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:43 IST
Last Updated 26 ಜನವರಿ 2026, 7:43 IST
ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಉಡುಪಿ: ಕೃತಕ ಬುದ್ಧಿಮತ್ತೆಯ (ಎಐ) ಅನುಕೂಲತೆಗಳನ್ನು ಸ್ವಾಗತಿಸಬೇಕು. ಆದರೆ ಅದು ಮಕ್ಕಳ ಸೃಷ್ಟಿಶೀಲ ಮನಸ್ಸನ್ನು ಭಸ್ಮ ಮಾಡುತ್ತದೆ. ಅದಕ್ಕೆ ಅನುವು ಮಾಡಿಕೊಡಬಾರದು ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಹೇಳಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ನಡೆದ ಸಂಸ್ಕೃತಿ ಉತ್ಸವದಲ್ಲಿ ಪಂಚಮಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಎಐ ಕ್ಷೇತ್ರ ಇಂದು ಬಹಳದೊಡ್ಡ ಸಾಧನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಅದು ಮಾನವನ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಪರಿಹರಿಸಬಲ್ಲದು ಎನ್ನಲಾಗುತ್ತಿದೆ. ಆದರೆ ಅದು ಲಕ್ಷ ಲಕ್ಷ ಜನರ ನೌಕರಿಗೂ ಕುತ್ತು ತರುತ್ತಿದೆ ಎಂದರು.

ADVERTISEMENT

ಎಐನಿಂದ ಎಷ್ಟೇ ಪ್ರಯೋಜನಗಳು ಸಿಕ್ಕಿದರೂ ಹೃದಯದ ಕಣ್ಣೀರನ್ನು ಅರ್ಥ ಮಾಡಿಕೊಳ್ಳಲು ಅದಕ್ಕೆ ಸಾಧ್ಯವಿಲ್ಲ. ಎಐ ಮುಂದೆ ಹೇಗೆ ಬದುಕಬೇಕೆಂಬ ಸವಾಲನ್ನು ನಾವು ಸ್ವೀಕರಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯಗಳು ನಮ್ಮ ಜೀವನಾಡಿಯಾಗಿವೆ. ಅವುಗಳಿಗೆ ಕುತ್ತು ಬಾರದಂತೆ ನೋಡಿಕೊಳ್ಳಬೇಕು. ಪ್ರತಿ ನಿಮಿಷವೂ ನಾವು ಪ್ರಪಂಚದಲ್ಲಿ ಆಮ್ಲಜನಕವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ದೇಶದ ಹೆಚ್ಚಿನ ಭೂಭಾಗಗಳಲ್ಲಿ ಹಸಿರು ಸಾಯುತ್ತಿದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ನಾವು ಎಚ್ಚರಿಕೆಯ ನಡೆ ಅನುಸರಿಸಬೇಕಾಗಿದೆ ಎಂದೂ ತಿಳಿಸಿದರು.

ವಿದ್ವಾಂಸ ಪ್ರೊ. ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ, ಲೇಖಕ ಗಿರೀಶ್ ರಾವ್ ಹತ್ವಾರ್, ಪಂಚಮಿ ಟ್ರಸ್ಟ್ ಸಂಸ್ಥಾಪಕ ಡಾ.ಎಂ.ಹರಿಶ್ಚಂದ್ರ, ಶಂಕರ್ ರೂಫಿಂಗ್ ಸಿಸ್ಟಮ್ ವ್ಯವಸ್ಥಾಪಕಿ ಸುಗುಣ ಸುವರ್ಣ, ಭುವನಪ್ರಸಾದ್ ಹೆಗ್ಡೆ, ಪ್ರೊ.ಶಂಕರ್, ವಿಶ್ವನಾಥ್ ಶೆಣೈ ಉಪಸ್ಥಿತರಿದ್ದರು. ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತು ಆಡಿದರು.

ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು. ಆಸ್ಟ್ರೋ ಮೋಹನ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.