ADVERTISEMENT

ಹದಗೆಟ್ಟ ಸರ್ವಿಸ್‌ ರಸ್ತೆ: ಸಂಚಾರ ದುಸ್ತರ

ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ ಸರ್ವಿಸ್‌ ರಸ್ತೆ: ವಾಹನ ದಟ್ಟಣೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:45 IST
Last Updated 1 ಫೆಬ್ರುವರಿ 2026, 7:45 IST
ಅಂಬಲಪಾಡಿಯ ಸರ್ವಿಸ್‌ ರಸ್ತೆ ದುರವಸ್ಥೆ
ಅಂಬಲಪಾಡಿಯ ಸರ್ವಿಸ್‌ ರಸ್ತೆ ದುರವಸ್ಥೆ   

ಉಡುಪಿ: ನಗರದ ಅಂಬಲಪಾಡಿ ಬೈಪಾಸ್‌ನಿಂದ ಕಿನ್ನಿಮುಲ್ಕಿಗೆ ತೆರಳುವ ಸರ್ವಿಸ್‌ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸುತ್ತಿದ್ದು, ಈ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ, ವಾಹನಗಳ ಸಂಚಾರ ದುಸ್ತರವಾಗಿದೆ.

ಸರ್ವಿಸ್‌ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಪದರ ಪದರವಾಗಿ ಎದ್ದು ಹೋಗಿರುವುದರಿಂದ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ದ್ವಿಚಕ್ರ ವಾಹನಗಳು ಆಯತಪ್ಪಿ ಬೀಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಮೊದಲೇ ಕಿರಿದಾದ ಸರ್ವಿಸ್‌ ರಸ್ತೆಯಲ್ಲಿ ಟ್ಯಾಂಕರ್‌, ಟ್ರಕ್‌ಗಳು ಸೇರಿದಂತೆ ಘನವಾಹನಗಳು ನಿರಂತರ ಸಂಚಾರ ನಡೆಸುತ್ತಿವೆ ಆದರೂ ಈ ರಸ್ತೆಯ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಿಲ್ಲ. ಸರ್ವಿಸ್‌ ರಸ್ತೆಯ ಇನ್ನೊಂದು ಬದಿಯ ರಸ್ತೆಯೂ ತೀರಾ ಹದಗೆಟ್ಟಿತ್ತು, ಹಲವು ತಿಂಗಳ ಬಳಿಕ ಅದನ್ನು ದುರಸ್ತಿ ಮಾಡಿದ್ದರು. ಈಗ ಇನ್ನೊಂದು ಬದಿಯ ರಸ್ತೆ ಹದಗೆಟ್ಟಿದೆ ಎಂದೂ ಹೇಳುತ್ತಾರೆ.

ಇದೇ ಸರ್ವಿಸ್‌ ರಸ್ತೆಯಲ್ಲಿ ಕೆಲ ತಿಂಗಳ ಹಿಂದೆ ರಸ್ತೆ ಹೊಂಡದಿಂದಾಗಿ ಆಯತಪ್ಪಿ ಬಿದ್ದಿದ್ದ ಬೈಕ್‌ ಸವಾರರೊಬ್ಬರ ತಲೆ ಮೇಲೆ ಟ್ರಕ್‌ ಹರಿದು ಅವರು ಮೃತಪಟ್ಟಿದ್ದರು.

ಅಂಬಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಸರ್ವಿಸ್‌ ರಸ್ತೆಗಳನ್ನು ವಿಸ್ತರಿಸಬೇಕೆಂಬ ಬೇಡಿಕೆಯೂ ಜನರಿಂದ ಕೇಳಿ ಬರುತ್ತಿದೆ. ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲದೆ ಮಳೆಗಾಲದಲ್ಲಿ ಚರಂಡಿ ನೀರು ಸರ್ವಿಸ್‌ ರಸ್ತೆಯಲ್ಲೇ ಹರಿಯುತ್ತದೆ ಎಂದು ಸ್ಥಳೀಯರು ದೂರುತ್ತಾರೆ.

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸರ್ವಿಸ್‌ ರಸ್ತೆಗಳಿಗೆ ಮರು ಡಾಂಬರೀಕರಣ ಮಾಡಲು ಸಾಧ್ಯವಾಗದಿದ್ದರೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ದುರಸ್ತಿ ಮಾಡಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸರ್ವಿಸ್‌ ರಸ್ತೆ ತೀರಾ ಹದಗೆಟ್ಟಿರುವುದರಿಂದ ಈ ರಸ್ತೆಯಲ್ಲಿ ಕೆಲವೊಮ್ಮೆ ವಾಹನ ದಟ್ಟಣೆಯೂ ಉಂಟಾಗುತ್ತಿದೆ. ತಕ್ಷಣ ಈ ರಸ್ತೆ ದುರಸ್ತಿಗೆ ಮುಂದಾಗಬೇಕು ಮತ್ತು ಸರ್ವಿಸ್‌ ರಸ್ತೆಗಳನ್ನು ವಿಸ್ತರಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.