
ಪಡುಬಿದ್ರಿ: ಉಡುಪಿ ರಾಜ್ಯದಲ್ಲಿಯೇ ಅತ್ಯಂತ ಸ್ವಚ್ಛ ಹಾಗೂ ಪ್ರಗತಿಯಲ್ಲೂ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಎಲ್ಲಡೆ ಇರುವಂತೆ ಉಡುಪಿ ಜಿಲ್ಲೆಯಲ್ಲೂ ತ್ಯಾಜ್ಯ ಸಮಸ್ಯೆಗಳಿವೆ. ಇದರ ವಿಲೇವಾರಿಗೆ ವಿನೂತನ ಯೋಜನೆ ಅನುಷ್ಠಾನಿಸಿರುವುದು ಹೆಮ್ಮೆಯಾಗಿದೆ. ಇಂತಹ ಘಟಕ ರಾಜ್ಯದ ಎಲ್ಲಾ ಕಡೆಗಳಲ್ಲೂ ಅನುಷ್ಠಾನಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ವಿವಿಧ ಸಂಜೀವಿನಿ ಒಕ್ಕೂಟಗಳ ಸಹಕಾರದಲ್ಲಿ ಎಲ್ಲೂರಿನಲ್ಲಿನ ಕಾಪು ಪುರಸಭಾ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಆರಂಭಿಸಲಾದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಸ್ವಚ್ಛ ಗ್ರಾಮ ಪರಿಕಲ್ಪನೆಯಡಿ, ಸಂಜೀವಿನಿ ಒಕ್ಕೂಟಗಳ ಮಹಿಳಾ ಸದಸ್ಯರೇ ನಿರ್ವಹಿಸಲಿರುವ ₹1.30 ಕೋಟಿ ವೆಚ್ಚದ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ತ್ಯಾಜ್ಯ ವಿಲೇವರಿ ಘಟಕವನ್ನು ನಿರ್ವಹಣೆ ಮಾಡುತ್ತಿರುವುದು ದೇಶದಲ್ಲಿಯೇ ಮೊದಲು. ಇದು ನಮಗೆಲ್ಲಾ ಆದರ್ಶ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಇತರೆಡೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡ ವಿನಯಕುಮಾರ್ ಸೊರಕೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ್ ರಾವ್, ಉಪಾಧ್ಯಕ್ಷೆ ಉಷಾ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಆಡಳಿತಾಧಿಕಾರಿ ಪೂರ್ಣಿಮಾ, ಕಾಪು ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶಮೂರ್ತಿ, ಎಲ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರದೀಪ್, ತ್ಯಾಜ್ಯ ನಿರ್ವಹಣಾ ಸಹಕಾರ ಸಂಘದ ಅಧ್ಯಕ್ಷೆ ಚಂದ್ರಕಲಾ, ಪಡುಬಿದ್ರಿ ಪಿಡಿಒ ಮಂಜುನಾಥ ಶೆಟ್ಟಿ ಇದ್ದರು.
ಹಾವಂಜೆ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಅವಸರದಲ್ಲಿಯೇ ತೆರಳಿದರು: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಸ್ವಾಗತ ಭಾಷಣಕ್ಕೂ ಅವಕಾಶ ನೀಡದೆ ನೇರ ಸಚಿವರ ಭಾಷಣಕ್ಕೆ ಅವಕಾಶ ಮಾಡಿಕೊಡಲಾಯಿತು. ಕೇವಲ ಐದು ನಿಮಿಷ ಮಾತನಾಡಿದ ಸಚಿವರು, ಬೆಂಗಳೂರಿಗೆ ಸಂಜೆಯ ವಿಮಾನದಲ್ಲಿ ಹಿಂತಿರುಗಬೇಕಾಗಿರುವ ಒತ್ತಡದಿಂದ 10 ನಿಮಿಷದಲ್ಲಿ ಕಾರ್ಯಕ್ರಮಕ್ಕೆ ತೆರೆಬಿತ್ತು.
ಸಿಇಒ ಕಾರ್ಯಕ್ಕೆ ಮೆಚ್ಚುಗೆ
ಕಸ ವಿಲೇವಾರಿ ಮಾಡುವುದು ರಾಜ್ಯದಲ್ಲಿಯೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರ ಪ್ರಯತ್ನ ಮೆಚ್ಚಲೇಬೇಕು. ರಾಜ್ಯದ ಎಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತುಕೊಂಡು ಕರ್ತವ್ಯ ನಿರ್ವಹಿಸಿದರೆ ಸಾಲದು ಸಮಾಜದ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.