ADVERTISEMENT

‘ವೈಕಲ್ಯ ಅಂಗಕ್ಕಷ್ಟೆ, ಜೀವನೋತ್ಸಾಹಕಲ್ಲ’

ವಿಕಲತೆ ಮೆಟ್ಟಿನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸಾಧಕರು

ಬಾಲಚಂದ್ರ ಎಚ್.
Published 3 ಡಿಸೆಂಬರ್ 2020, 13:08 IST
Last Updated 3 ಡಿಸೆಂಬರ್ 2020, 13:08 IST
ಜಗದೀಶ್ ಭಟ್‌
ಜಗದೀಶ್ ಭಟ್‌   

ಉಡುಪಿ: ಅಂಗವೈಕಲ್ಯವನ್ನು ಬದಿಗೊತ್ತಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಹಲವು ಸಾಧಕರು ಸಮಾಜದ ಪ್ರೇರಕ ಶಕ್ತಿಯಾಗಿ ಬದುಕುತ್ತಿದ್ದಾರೆ. ‘ಅಂಗವೈಕಲ್ಯ ದೇಹಕ್ಕೆ ಮಾತ್ರ; ಚೇತನಕ್ಕಲ್ಲ’ ಎಂಬ ಅರಿವಿನೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಅಂಥವರಲ್ಲಿ ಅಂಬಲಪಾಡಿಯ ಜಗದೀಶ್‌ ಭಟ್‌ ಕೂಡ ಒಬ್ಬರು.

6 ವರ್ಷದ ಬಾಲಕನಾಗಿದ್ದಾಗ ಪೋಲಿಯೊ ಕಾಯಿಲೆಗೆ ತುತ್ತಾಗಿ ಕಾಲಿನ ಹಾಗೂ ಸೊಂಟದ ಸ್ವಾಧೀನ ಕಳೆದುಕೊಂಡ ಜಗದೀಶ್ ಭಟ್‌ ಜೀವನೋತ್ಸಾಹ ಕಳೆದುಕೊಳ್ಳಲಿಲ್ಲ. ಆರಂಭದಲ್ಲಿ ಬದುಕಿಗೆ ಆಧಾರವಾಗಿರಲಿ ಎಂದು ತ್ರಿಚಕ್ರ ವಾಹನ ಓಡಿಸುವ ತರಬೇತಿ ಪಡೆದ ಜಗದೀಶ್ ಭಟ್‌, ತನ್ನಂತೆಯೇ ಅಂಗವೈಕಲ್ಯ ಹೊಂದಿದವರು ಚಾಲನಾ ತರಬೇತಿ ಪಡೆಯಲು ಹಾಗೂ ಪರವಾನಗಿ ಪಡೆಯಲು ಅನುಭವಿಸುತ್ತಿದ್ದ ಕಷ್ಟ ಹಾಗೂ ಮುಜುಗರವನ್ನು ಕಂಡು, ಕಲಿತ ವಿದ್ಯೆಯನ್ನು ಉಚಿತವಾಗಿ ಅಂಗವಿಕಲರಿಗೆ ಕಲಿಸಲು ನಿರ್ಧರಿಸಿದರು.

ಅಂಗವಿಕಲರು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗದೆ ಸ್ವತಂತ್ರವಾಗಿ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಅವರಿಗೆ ವಾಹನ ಚಾಲನೆ ತರಬೇತಿ ನೀಡುತ್ತಿರುವ ಜಗದೀಶ್ ಭಟ್‌, ಎಲ್‌ಎಲ್‌ಆರ್‌ ಹಂತದಿಂದ ಚಾಲನಾ ಪರವಾನಗಿ ಪಡೆಯುವ ಹಂತದವರೆಗೂ ಅಗತ್ಯ ನೆರವು ನೀಡುತ್ತಿದ್ದಾರೆ. ಇದುವರೆಗೂ ನೂರಾರು ಅಂಗವಿಕಲರಿಗೆ ಶುಲ್ಕ ಪಡೆಯದೆ ಡಿಎಲ್‌ ಮಾಡಿಸಿಕೊಡಲು ನೆರವಾಗಿದ್ದಾರೆ.

ADVERTISEMENT

ಅಂಗವಿಕಲರು ಪ್ರತಿ ಕ್ಷಣವನ್ನು ಸಂತಸದಿಂದ ಕಳೆಯಬೇಕು, ಅವರೊಳಗಿನ ಪ್ರತಿಭೆ ಕಮರಬಾರದು ಎಂಬ ಉದ್ದೇಶದಿಂದ ಅಂಗವಿಕಲರ ಹುಲಿವೇಷ ತಂಡ ಕಟ್ಟಿ ಭಟ್‌ ಏಳು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯ ಸಂದರ್ಭ ಅಂಗವಿಕಲರಿಂದ ಹುಲಿ ವೇಷ ಹಾಕಿಸಿ ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. ಜತೆಗೆ ಅಂಗವಿಕಲರಿಗೆ ಯಕ್ಷಗಾನ ತರಬೇತಿ ಕೊಡಿಸಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದಾರೆ.

ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು, ಸ್ವಂತ ಕಾಲಿನ ಮೇಲೆ ನಿಂತು ಬದುಕು ಸಾಗಿಸಲು ನೆರವು ಸಿಗಬೇಕು ಎಂಬ ಒತ್ತಾಯ ಅವರದ್ದು.

ಕೃಷಿಯಲ್ಲಿ ಖುಷಿ ಕಂಡ ಸಾಧಕ:

ಬೈಂದೂರು ತಾಲ್ಲೂಕಿನ ಜಡ್ಕಲ್‌ ಗ್ರಾಮ ಪಂಚಾಯಿತಿಯ ಮುದೂರು ಗ್ರಾಮದ ಬಾಲಕೃಷ್ಣ ಅವರಿಗೂ ಅಂಗವೈಕಲ್ಯ ಜೀವನೋತ್ಸಾಹವನ್ನು ಕುಂದಿಸಿಲ್ಲ. ಕಾಲುಗಳ ಸ್ವಾಧೀನ ಇಲ್ಲದಿದ್ದರೂ ಕೈಗಳನ್ನೇ ಕಾಲುಗಳನ್ನಾಗಿ ಮಾಡಿಕೊಂಡು ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ ಅವರು. 58ರ ವಯಸ್ಸಿನಲ್ಲೂ ಅವಲಂಬಿತರಾಗದೆ ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದಾರೆ ಬಾಲಕೃಷ್ಣ ಮುದೂರು.

ಒಂದು ಎಕರೆ ಜಾಗದಲ್ಲಿ ಚಿಕ್ಕದೊಂದು ನರ್ಸರಿ ನಿರ್ಮಿಸಿಕೊಂಡು ಗೇರು, ಕಾಳುಮೆಣಸು, ಹೂವಿನ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಓದು, ಬರಹ ಕಲಿಯದಿದ್ದರೂ ಪ್ರಾಪಂಚಿಕ ಜ್ಞಾನ ಪಡೆದು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ತಾಲ್ಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೀವನದ ಬಹು ಸಮಯವನ್ನು ತೆವಳುತ್ತಲೇ ಕಳೆದಿರುವ ಬಾಲಕೃಷ್ಣ ಮುದೂರು ಅವರ ಸಾಧನೆ ಸಮಾಜಕ್ಕೆ ಪ್ರೇರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.