ADVERTISEMENT

ಉದ್ಯಮಶೀಲತೆಯಲ್ಲೂ ಉಡುಪಿ ಮಾದರಿಯಾಗಲಿ: ಶಿವಕಾಂತಮ್ಮ (ಕಾಂತಾ) ನಾಯಕ

ಶಿವಕಾಂತಮ್ಮ ನಾಯಕ ಅಧ್ಯಕ್ಷತೆಯಲ್ಲಿ ಕೌಶಲಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:43 IST
Last Updated 21 ಸೆಪ್ಟೆಂಬರ್ 2025, 5:43 IST
ಶಿವಕಾಂತಮ್ಮ ನಾಯಕ ಅಧ್ಯಕ್ಷತೆಯಲ್ಲಿ ಕೌಶಲಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಶಿವಕಾಂತಮ್ಮ ನಾಯಕ ಅಧ್ಯಕ್ಷತೆಯಲ್ಲಿ ಕೌಶಲಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಉಡುಪಿ: ಶೈಕ್ಷಣಿಕವಾಗಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯು ಉದ್ಯಮಶೀಲತೆಯಲ್ಲೂ ಗಮನಾರ್ಹ ಸಾಧನೆ ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೌಶಲಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಹಂತಗಳಲ್ಲೇ ಮಕ್ಕಳಲ್ಲಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಕೌಶಲಾಧಾರಿತ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವಂತಹ ತರಬೇತಿ ನೀಡುವಲ್ಲಿ ಜಿಲ್ಲೆಯ ಎಲ್ಲ ವಿದ್ಯಾಸಂಸ್ಥೆಗಳು ಮತ್ತು ಐಟಿಐಗಳು ಮುತುವರ್ಜಿ ವಹಿಸಬೇಕು ಎಂದರು.

ADVERTISEMENT

ಯುವನಿಧಿ ಯೋಜನೆಯಡಿ 3,967 ಅಭ್ಯರ್ಥಿಗಳು ನೋಂದಣಿ ಮಾಡಿದ್ದು ಅವರಲ್ಲಿ 3,088 ಅಭ್ಯರ್ಥಿಗಳು ಫಲಾನುಭವಿಗಳಾಗಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕು. ಯುವನಿಧಿ ಪ್ಲಸ್ ಕಾರ್ಯಕ್ರಮದಡಿ 65 ಯುವನಿಧಿ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದ್ದು, ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯನ್ನು ಯುವಜನರ ಕೌಶಲಾಭಿವೃದ್ಧಿಯನ್ನು ಸುಧಾರಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದರು.

2025ರ ವಿಶ್ವಕೌಶಲ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದ್ದು, ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅರಿವು ಮೂಡಿಸುವ ಕಾರ್ಯಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ನಡೆಸುವ ಕರ್ನಾಟಕ ಸ್ಕಿಲ್ಸ್‌ನಲ್ಲಿ ಮೆಡಲ್ ಆಫ್ ಎಕ್ಸಲೆನ್ಸ್‌ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದ ವತಿಯಿಂದ ₹5 ಲಕ್ಷ ಬಹುಮಾನ ಹಾಗೂ ಇಂಡಿಯಾ ಸ್ಕಿಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ₹1 ಲಕ್ಷ ಬಹುಮಾನ ನೀಡಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ನಲ್ ಜಲ್ ಮಿತ್ರ ಯೋಜನೆಯ ಮೂಲಕ 155 ಗ್ರಾಮ ಪಂಚಾಯಿತಿಗಳಲ್ಲಿ 86 ಪಂಚಾಯಿತಿಗಳಲ್ಲಿ 144 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 135 ಅಭ್ಯರ್ಥಿಗಳಿಗೆ ಟೂಲ್ ಕಿಟ್ ವಿತರಿಸಲಾಗಿದೆ. ಈ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಪಿಡಿಒಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲೆಯಲ್ಲಿ ನಡೆಯುವ ಉದ್ಯೋಗ ಮೇಳಗಳಲ್ಲಿ ಇದುವರೆಗೆ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ ಎನ್ನುವ ಸ್ಪಷ್ಟ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ, ಉದ್ಯೋಗ ವಿನಿಮಯ ಅಧಿಕಾರಿಗಳು, ಐಟಿಐ ಸಂಸ್ಥೆಗಳ ಪ್ರಾಂಶುಪಾಲರು, ಡಿಡಿಪಿಐ, ಡಿಡಿಪಿಯು ಇದ್ದರು.

ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು
ಶಿವಕಾಂತಮ್ಮ ನಾಯಕ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ

‘ ಸ್ಥಳೀಯವಾಗಿ ತರಬೇತಿ ನೀಡಿ’

ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ಪ್ರಾದೇಶಿಕ ಪಾರಂಪರಿಕ ಕಲೆಗಳಿದ್ದಲ್ಲಿ ಅವುಗಳ ಪುನಶ್ಚೇತನಕ್ಕಾಗಿ ಅಂತಹ ಕಲೆಗಳನ್ನು ಗುರುತಿಸಿ ಸ್ಥಳೀಯವಾಗಿ ತರಬೇತಿ ನೀಡಬೇಕು. ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳಾದ ಎಐ ತಂತ್ರಜ್ಞಾನ ಮೆಷಿನ್ ಲರ್ನಿಂಗ್ ಸೆಮಿಕಂಡಕ್ಟರ್ ಚಿಪ್ ಮರುಬಳಕೆ ಇಂಧನಾಧಾರಿತ ಕ್ಷೇತ್ರಗಳಿಗೆ ಒತ್ತು ನೀಡಿ ತರಬೇತಿಗಳನ್ನು ರೂಪಿಸಬೇಕು. ಸಿಎನ್‌ಸಿ ಮೆಷಿನಿಂಗ್‌ನಂತಹ ತಾಂತ್ರಿಕ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೆ ಬಹು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವಂತೆ ಅವರ ಮನವೊಲಿಸಬೇಕು ಎಂದು ಶಿವಕಾಂತಮ್ಮ ನಾಯಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.