ADVERTISEMENT

ಉಡುಪಿ | ಮಾಗಿದ ಪೈರು: ಮಳೆ ಆತಂಕದಲ್ಲಿ ರೈತರು

ಜಿಲ್ಲೆಯಲ್ಲಿ ಭತ್ತದ ಕಟಾವಿಗೆ ಸಿದ್ಧತೆ: ಬಂದಿವೆ ಹೊರ ಜಿಲ್ಲೆಗಳ ಕಟಾವು ಯಂತ್ರಗಳು

ನವೀನ್ ಕುಮಾರ್ ಜಿ.
Published 16 ಅಕ್ಟೋಬರ್ 2025, 4:43 IST
Last Updated 16 ಅಕ್ಟೋಬರ್ 2025, 4:43 IST
ಉಡುಪಿಯ ಕಸ್ತೂರ್ಬಾ ನಗರದಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಬೆಳೆ – ಪ್ರಜಾವಾಣಿ ಚಿತ್ರ
ಉಡುಪಿಯ ಕಸ್ತೂರ್ಬಾ ನಗರದಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಬೆಳೆ – ಪ್ರಜಾವಾಣಿ ಚಿತ್ರ   

ಉಡುಪಿ: ಜಿಲ್ಲೆಯಾದ್ಯಂತ ರೈತರು ಭತ್ತದ ಕೊಯ್ಲಿಗೆ ಸಿದ್ದತೆ ನಡೆಸಿದ್ದು, ಸಣ್ಣ ಪ್ರಮಾಣದಲ್ಲಿ ಮಳೆ ಬರುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

ತಮಿಳುನಾಡು, ಶಿವಮೊಗ್ಗ, ದಾವಣಗೆರೆ, ಗಂಗಾವತಿ ಮೊದಲಾದೆಡೆಗಳಿಂದ ಭತ್ತದ ಕಟಾವು ಮಾಡುವ ಯಂತ್ರಗಳು ಜಿಲ್ಲೆಗೆ ತಲುಪಿದ್ದು, ಕೆಲವೆಡೆ ಕೊಯ್ಲು ಕಾರ್ಯ ಈಗಾಗಲೇ ಆರಂಭವಾಗಿದೆ.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಭತ್ತದ ಕೊಯ್ಲಿಗೆ ರೈತರು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಭತ್ತ ನಾಟಿ ಮಾಡಿರುವ ರೈತರು ಈ ಬಾರಿ ಒಡಿಶಾ ಮೊದಲಾದ ಹೊರ ರಾಜ್ಯಗಳ ಕಾರ್ಮಿಕರನ್ನು ಕಟಾವು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ADVERTISEMENT

ಮಲ್ಪೆ ಮೊದಲಾದೆಡೆ ಫಿಶ್‌ಮಿಲ್‌ಗಳಲ್ಲಿ ಕೆಲಸಕ್ಕೆ ಬರುವ ಒಡಿಶಾ ಸೇರಿದಂತೆ ಉತ್ತರ ಭಾರತದ ಕಾರ್ಮಿಕರಿಗೆ ಕೆಲಸದೊತ್ತಡವಿಲ್ಲದ ಸಮಯದಲ್ಲಿ ಭತ್ತ ಕಟಾವು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಕಟಾವು ಕಾರ್ಯದಲ್ಲಿ ಅವರು ನಿಪುಣರಲ್ಲದಿದ್ದರೂ ತೆನೆಗಳನ್ನು ಹೊತ್ತು ಮನೆಗೆ ಸಾಗಿಸುವ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

‘ಕೊಯ್ಲಿನ ಸಂದರ್ಭದಲ್ಲಿ ಸಣ್ಣ ಮಳೆ ಬಂದರೂ ಭತ್ತದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೋರಾಗಿ ಮಳೆ ಬಂದು ಗದ್ದೆಗಳಲ್ಲಿ ನೀರು ತುಂಬಿದರೆ ಪೈರುಗಳು ಮೊಳಕೆ ಬರುವ ಸಾಧ್ಯತೆ ಇರುತ್ತದೆ. ಕೊಯ್ಲಿನ ಸಂದರ್ಭದಲ್ಲಿ ಭತ್ತದ ಗದ್ದೆಯೂ ಒಣಗಿದ್ದರೆ ಉತ್ತಮವಾಗಿರುತ್ತದೆ’ ಎಂದು ಪರ್ಕಳದ ಭತ್ತದ ಬೆಳೆಗಾರ ಸುರೇಶ್‌ ನಾಯಕ್‌ ತಿಳಿಸಿದರು.

‘ಇನ್ನು ಹದಿನೈದು ದಿನಗಳೊಳಗೆ ಎಲ್ಲಾ ಕಡೆ ಕೊಯ್ಲು ಆರಂಭವಾಗಬಹುದು ಈ ಅವಧಿ ನಿರ್ಣಾಯಕವಾಗಿದ್ದು, ಜೋರು ಮಳೆಯಾದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದು. ಈ ವರ್ಷ ಭತ್ತದ ಕಟಾವು ಯಂತ್ರದ ಬಾಡಿಗೆ ಇದುವರೆಗೆ ಏರಿಕೆಯಾಗಿಲ್ಲ. ಗಂಟೆಗೆ ₹ 2,400 ರಿಂದ ₹2,500 ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

ಕಳೆದ ವರ್ಷ ಪದೇ ಪದೇ ನೆರೆ ಹಾವಳಿ ಕಾಣಿಸಿಕೊಂಡಿದ್ದ ಪರಿಣಾಮವಾಗಿ ಜಿಲ್ಲೆಯಲ್ಲಿ ಭತ್ತದ ಬೆಳೆ ಸಾಕಷ್ಟು ನಾಶವಾಗಿತ್ತು. ಈ ಭಾರಿ ನಿರಂತರ ಮಳೆ ಬಂದಿದ್ದರೂ ನೆರೆ ಹಾವಳಿ ಕಡಿಮೆ ಇದ್ದುದರಿಂದ ಭತ್ತದ ಕೃಷಿಗೆ ಹೆಚ್ಚು ಹಾನಿ ಸಂಭವಿಸಿಲ್ಲ ಎಂದು ಬೆಳೆಗಾರರು ತಿಳಿಸಿದ್ದಾರೆ.

‘ಯಂತ್ರಗಳನ್ನು ಬಳಸಿ ಭತ್ತ ಕಟಾವು ಮಾಡುವಾಗ ಶೇ 10 ರಿಂದ ಶೇ 20 ರಷ್ಟು ಭತ್ತದ ಪೈರು ಗದ್ದೆಗೆ ಬಿದ್ದು, ರೈತರಿಗೆ ನಷ್ಟ ಉಂಟಾಗುತ್ತದೆ. ಯಂತ್ರಗಳಲ್ಲಿ ಕಟಾವು ಮಾಡಿಸುವ ವೇಳೆ ರೈತರು ಈ ಬಗ್ಗೆ ಗಮನ ಹರಿಸಿ ಕಟಾವು ಯಂತ್ರವನ್ನು ಸಮರ್ಪಕವಾಗಿ ಬಳಸುವಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.

‘ಭತ್ತ ಕಟಾವು ಯಂತ್ರದ ಬಾಡಿಗೆಯನ್ನು ಏರಿಕೆ ಮಾಡದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು’ ಎಂದಿದ್ದಾರೆ.

ಆಗಾಗ ಮಳೆ ಬರುತ್ತಿದ್ದರೆ ಭತ್ತದ ಕೊಯ್ಲಿಗೆ ಎಲ್ಲಾ ರೈತರು ಧಾವಂತ ತೋರಿಸುತ್ತಾರೆ. ಆಗ ಬೇಡಿಕೆ ಜಾಸ್ತಿಯಾಗಿ ಕಟಾವು ಮಾಡುವ ಯಂತ್ರಗಳ ಬಾಡಿಗೆಯೂ ಏರುವ ಸಾಧ್ಯತೆ ಇರುತ್ತದೆ
ರವೀಂದ್ರ ಪೂಜಾರಿ ರೈತ

‘ಭತ್ತ ಖರೀದಿ ಕೇಂದ್ರ ಶೀಘ್ರ ಆರಂಭಿಸಿ’

ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾಗಿದ್ದು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವ ಪ್ರಕ್ರಿಯೆಯನ್ನು ಸಂಬಂಧಪಟ್ಟವರು ಶೀಘ್ರ ಆರಂಭಿಸಬೇಕು ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಆಗ್ರಹಿಸಿದ್ದಾರೆ. ಪ್ರತಿ ವರ್ಷವೂ ಭತ್ತ ಖರೀದಿ ಕೇಂದ್ರವನ್ನು ತಡವಾಗಿ ಆರಂಭಿಸುವುದರಿಂದ ಈ ಯೋಜನೆಯ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ. ಖರೀದಿ ಕೇಂದ್ರ ಆರಂಭವಾಗುವಷ್ಟರಲ್ಲಿ ರೈತರು ಮಿಲ್‌ನವರಿಗೆ ಭತ್ತ ಮಾರಾಟ ಮಾಡಿರುತ್ತಾರೆ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.