ADVERTISEMENT

ಉಡುಪಿ: ಹಾವಂಜೆ ಪರಿಸರದಲ್ಲಿ 93 ಪಕ್ಷಿ ಪ್ರಬೇಧ

ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಹಕ್ಕಿಗಳನ್ನು ಗುರುತಿಸಿದ ಪಕ್ಷಿಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 6:39 IST
Last Updated 15 ಡಿಸೆಂಬರ್ 2022, 6:39 IST
ಹಾವಂಜೆ ಪರಿಸರದಲ್ಲಿ ಪತ್ತೆಯಾದ ಗ್ರೇ ಹೆಡೆಡ್‌ ಸ್ವಾಂಪೆನ್‌
ಹಾವಂಜೆ ಪರಿಸರದಲ್ಲಿ ಪತ್ತೆಯಾದ ಗ್ರೇ ಹೆಡೆಡ್‌ ಸ್ವಾಂಪೆನ್‌   

ಉಡುಪಿ: ಸುಂದರ ನದಿಯ ತೀರ, ಹಚ್ಚ ಹಸಿರಿನ ಕೃಷಿ ಭೂಮಿ, ಅರಣ್ಯ ಪ್ರದೇಶ, ಹಳ್ಳಿಯ ಸುಂದರ ಪರಿಸರವನ್ನೊಳಗೊಂಡಿರುವ ಹಾವಂಜೆಯಲ್ಲಿ ಬುಧವಾರ ಪಕ್ಷಿ ಪ್ರೇಮಿಗಳು ದೇಶ ವಿದೇಶಗಳಿಂದ ವಲಸೆ ಬಂದಿದ್ದ ಹಕ್ಕಿಗಳನ್ನು ಗುರುತಿಸಿ ಸಂಭ್ರಮಿಸಿದರು.

ಗ್ರಾಮೀಣ ಮಟ್ಟದಲ್ಲಿ ಜೀವ ವೈವಿಧ್ಯತೆಯನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಾವಂಜೆಯ ಭಾವನಾ ಪ್ರತಿಷ್ಠಾನವು, ಹಾವಂಜೆ ಗ್ರಾಮ ಪಂಚಾಯತಿ, ಜೀವ ವೈವಿಧ್ಯ ಸಮಿತಿ, ಗ್ರಾಮ ವಿಕಾಸ ಸಮಿತಿ ಹಾಗೂ ಮಣಿಪಾಲ ಬರ್ಡರ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ 93 ಪ್ರಬೇಧಗಳ ಹಕ್ಕಿಗಳನ್ನು ಗುರುತಿಸಲಾಯಿತು.

ಎರಡು ಘಂಟೆಯ ಅವಧಿಯಲ್ಲಿ ಪಕ್ಷಿ ಪ್ರಿಯರು ಸೈಬಿರಿಯಾ, ಅಫ್ಗಾನಿಸ್ತಾನ, ದಕ್ಷಿಣ ರಷ್ಯಾ, ಯುರೋಪ್‌ ಹಾಗೂ ಹಿಮಾಲಯದಿಂದ ವಲಸೆ ಬಂದಿದ್ದ ಪಕ್ಷಿಗಳನ್ನು ಗುರುತಿಸಿ ಫೋಟೊ ಕ್ಲಿಕ್ಕಿಸಿಕೊಂಡರು.

ADVERTISEMENT

ಪರಿಸರವಾದಿ ಶ್ಯಾಂಕುಮಾರ್ ಪೂರ್ವಂಕರ ಮಾತನಾಡಿ, ಪಕ್ಷಿಗಳು ಇಲ್ಲದೆ ಮನುಷ್ಯ ಬದುಕುವುದು ಅಸಾದ್ಯ. ಪಕ್ಷಿಗಳ ಉಳಿವಿನ ಮಹತ್ವವನ್ನು ಅರ್ಥೈಸಿಕೊಂಡು ಜೀವ ವೈವಿಧ್ಯತೆಗಳನ್ನು ಸಂರಕ್ಷಿಸಿ ಕಾಪಿಡಬೇಕು ಎಂದು ಸಲಹೆ ನೀಡಿದರು.

ಬಹಳ ಅಪರೂಪದ್ದ ಎನ್ನಲಾದ ಒರಿಯಂಟಲ್ ಟರ್ಟಲ್ ಡವ್, ಬೌವ್ನ್ ಬ್ರೀಸ್ಟೆಡ್ ಲೈಕ್ಯಾಚರ್, ಬೇ ಬ್ಯಾಕ್ ಶ್ರೈಕ್ ಸೇರಿದಂತೆ ಹಲವು ಪಕ್ಷಿಗಳನ್ನು ಗುರುತಿಸಲಾಯಿತು. ಕಳೆದ ಬಾರಿ ಇದೇ ಜಾಗದಲ್ಲಿ 78 ಹಕ್ಕಿಗಳ ಪ್ರಬೇಧ ಗುರುತಿಸಲಾಗಿತ್ತು. ಈ ಬಾರಿ 93 ಪ್ರಬೇಧಗಳು ನೋಡಲು ಸಿಕ್ಕಿದ್ದು ಬಹಳ ಖುಷಿಕೊಟ್ಟಿದೆ. ಪಕ್ಷಿಧಾಮದಲ್ಲೂ ಸಿಗಲಾರದಷ್ಟು ಪ್ರಬೇಧಗಳು ಹಾವಂಜೆ ಪರಿಸರದಲ್ಲಿ ನೋಡಲು ಸಿಕ್ಕಿವೆ ಎಂದು ಪಕ್ಷಿ ವೀಕ್ಷಣಾ ಕಾರ್ಯಕ್ರಮದ ಸಂಯೋಜಕ ಡಾ.ಜನಾರ್ದನ ಹಾವಂಜೆ ತಿಳಿಸಿದರು.

ಅಳಿವಿನಂಚಿನಲ್ಲಿರುವ ಪಕ್ಷಿಗಳ ಪ್ರಬೇಧಗಳನ್ನು ಗುರುತಿಸುವುದು, ಸಾರ್ವಜನಿಕರಿಗೆ ತಿಳಿವಳಿಕೆ ಹಾಗೂ ಜಾಗೃತಿ ಮೂಡಿಸುವುದು. ಪಕ್ಷಿಗಳಿಗೆ ಆಹಾರದ ಕೊರತೆಯಾಗದಂತೆ ಗ್ರಾಮದ ಸುತ್ತಮುತ್ತಲಿನ ಪರಿಸರ, ಸರ್ಕಾರಿ ಜಾಗ ಹಾಗೂ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಪ್ರೇರೇಪಿಸುವುದು ಪಕ್ಷಿ ವೀಕ್ಷಣೆ ಕಾರ್ಯಕ್ರಮದ ಉದ್ದೇಶವೂ ಹೌದು ಎಂದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವ್ಯಾ, ಪಂಚಾಯಿತಿ ಅಧ್ಯಕ್ಷ ಅಜಿತ್ ಗೋಳಿಕಟ್ಟೆ, ಸದಸ್ಯ ಉದಯ ಕೋಟ್ಯಾನ್, ಮಣಿಪಾಲ ಬರ್ಡರ್ಸ್ ಕ್ಲಬ್‍ನ ತೇಜಸ್ವಿ ಆಚಾರ್ಯ, ಡಾ. ಕೇತಕಿ, ಲಯನ್ಸ್ ಕ್ಲಬ್‍ನ ರಮಾನಂದ ಪ್ರಭು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.