
ಉಡುಪಿ: ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಕಿಂಡಿ ಅಣೆಕಟ್ಟೆಗಳು ಪ್ರಮುಖ ಜಲಮೂಲಗಳಾಗಿದ್ದು, ನಿರ್ವಹಣೆ ಕೊರತೆಯಿಂದ ವಿವಿಧೆಡೆ ಅವುಗಳ ಪ್ರಯೋಜನ ಸಿಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ.
ಕೃಷಿಗೆ ನೀರು ಒದಗಿಸುವುದರ ಜೊತೆಗೆ ಅಂತರ್ಜಲ ವೃದ್ಧಿಗೂ ಕಿಂಡಿ ಅಣೆಕಟ್ಟೆಗಳು ಅತ್ಯಂತ ಸಹಕಾರಿಯಾಗಿದೆ. ಭತ್ತದ ಎರಡನೇ ಬೆಳೆಗೆ ಮತ್ತು ತರಕಾರಿ ಬೆಳೆಗೂ ಇದರ ನೀರನ್ನು ಆಶ್ರಯಿಸುವ ರೈತರೂ ಜಿಲ್ಲೆಯಲ್ಲಿದ್ದಾರೆ.
ಈ ಭಾಗದ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಕಿಂಡಿ ಅಣೆಗಟ್ಟೆಗಳ ನಿರ್ವಹಣೆಗಾಗಿ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಘೋಷಿಸಿ, ಯೋಜನೆ ರೂಪಿಸಬೇಕೆಂಬ ಬೇಡಿಕೆ ರೈತರಿಂದ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕಿಂಡಿ ಅಣೆಕಟ್ಟುಗಳಿದ್ದು, ಸಣ್ಣ ನೀರಾವರಿ ಇಲಾಖೆ, ಜಲಾನಯನ ಇಲಾಖೆ, ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಅವುಗಳನ್ನು ನಿರ್ಮಿಸಲಾಗಿದೆ.
ಕೆಲವೆಡೆ ಈ ಕಿಂಡಿ ಅಣೆಕಟ್ಟೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯವರು ನೋಡಿಕೊಳ್ಳುತ್ತಿದ್ದು, ಸಮರ್ಪಕ ಅನುದಾನದ ಕೊರತೆಯಿಂದ ಅವುಗಳ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಕೃಷಿಕರ ಆರೋಪ.
ಕಿಂಡಿ ಅಣೆಕಟ್ಟೆಗಳಿಗೆ ಸೂಕ್ತ ಸಮಯದಲ್ಲಿ ಹಲಗೆ ಅಳವಡಿಸದಿರುವುದರಿಂದಲೂ ಸಮಸ್ಯೆಯಾಗುತ್ತಿದೆ. ಮಳೆಗಾಲ ಮುಗಿದ ಕೂಡಲೇ ಅಳವಡಿಸಿದರೆ ನೀರು ಸಂಗ್ರಹವಾಗುತ್ತದೆ. ವಿಳಂಬ ಮಾಡಿದರೆ ಸಾಕಷ್ಟು ನೀರು ಸಂಗ್ರಹವಾಗುವುದಿಲ್ಲ. ಕೆಲವೆಡೆ ಹಲಗೆ ಅಳವಡಿಸದಿರುವುದರಿಂದ ಉಪ್ಪುನೀರು ನುಗ್ಗುತ್ತದೆ ಎನ್ನುತ್ತಾರೆ ರೈತರು. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಸಲಾಗುತ್ತದೆ, ಆದರೆ ಕೆಲವೆಡೆ ಜನವರಿ ತಿಂಗಳವರೆಗೂ ವಿಳಂಬವಾಗುತ್ತಿದೆ ಎಂದೂ ದೂರುತ್ತಾರೆ.
ಕಿಂಡಿ ಅಣೆಕಟ್ಟೆಗಳ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂಬುದು ಜನರ ಆಗ್ರಹವಾಗಿದೆ. ಕೆಲವೆಡೆ ಕಿಂಡಿ ಅಣೆಕಟ್ಟೆಗಳಲ್ಲಿ ನಿರಂತರ ಸೋರಿಕೆಯಾಗುವುದರಿಂದಲೂ ಬೇಸಿಗೆಯಲ್ಲಿ ನೀರಿನ ಕ್ಷಾಮ ತಲೆದೋರುತ್ತದೆ. ಅವುಗಳ ಪುನಃಶ್ಚೇತನಕ್ಕೂ ಅನುದಾನ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹಿಂದೆ ಬಹುತೇಕ ಕಿಂಡಿ ಅಣೆಕಟ್ಟೆಗಳಿಗೂ ಮರದ ಹಲಗೆಗಳನ್ನು ಬಳಸಲಾಗುತ್ತಿತ್ತು. ಈಗ ಫೈಬರ್ ಹಲಗೆಗಳನ್ನು ಅಳವಡಿಸಲಾಗುತ್ತಿದೆ. ಅವುಗಳು ದೀರ್ಘಕಾಲ ಬಾಳ್ವಿಕೆ ಬರುತ್ತವೆ ಮತ್ತು ಅವುಗಳ ನಿರ್ವಹಣೆಯೂ ಸುಲಭವಾಗುತ್ತದೆ. ಕೆಲವೆಡೆ ಕಿಂಡಿ ಅಣೆಕಟ್ಟೆಗಳಲ್ಲಿ ಕಸ ಸಂಗ್ರಹವಾಗುವುದರಿಂದಲೂ ಹಲಗೆಗಳು ಶಿಥಿಲವಾಗುತ್ತವೆ. ಕಾಲ ಕಾಲಕ್ಕೆ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಕಿಂಡಿ ಅಣೆಕಟ್ಟೆಗೆ ಉತ್ತಮ ಗುಣಮಟ್ಟದ ಹಲಗೆಗಳನ್ನು ಅಳವಡಿಸಬೇಕು ಎಂದೂ ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ರೈತರು ತಮ್ಮ ಕೃಷಿಗೆ ಬೇಕಾದ ನೀರಾವರಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಬೋರ್‌ವೆಲ್, ಬಾವಿ ಮೊದಲಾದವುಗಳನ್ನೂ ಆಶ್ರಯಿಸುತ್ತಾರೆ. ಕಿಂಡಿ ಅಣೆಕಟ್ಟೆಗಳಿಂದ ಅಂತರ್ಜಲ ವೃದ್ಧಿಯಾಗುವುದರಿಂದ ಅಂತಹ ರೈತರಿಗೂ ಅನುಕೂಲವಾಗುತ್ತಿದೆ.
‘ಅನುದಾನ ಘೋಷಿಸಿ’
ಕಿಂಡಿ ಅಣೆಕಟ್ಟಿನಿಂದಾಗಿ ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಹಾಗೂ ಭತ್ತದ ಎರಡನೇ ಬೆಳೆ ತರಕಾರಿ ಬೆಳೆಯುವವರಿಗೂ ಹೆಚ್ಚಿನ ಅನುಕೂಲವಾಗುತ್ತಿದ್ದು ಅವುಗಳ ನಿರ್ವಹಣೆಗಾಗಿ ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿರಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಆಗ್ರಹಿಸಿದ್ದಾರೆ. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ವಾರಾಹಿ ಯೋಜನೆಯ ಕಾಮಗಾರಿಗಳು ಇನ್ನೂ ಗುರಿ ಮುಟ್ಟಿಲ್ಲ. ಇದರಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟೆಗಳ ನಿರ್ವಹಣೆಗೆ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಅವರು ಹೇಳಿದ್ದಾರೆ.